ADVERTISEMENT

ರಾಷ್ಟ್ರಪತಿ ನಿಮ್ಮ ಜೇಬಿನಲ್ಲಿದ್ದಾರೆಯೇ? ಬಿಜೆಪಿಗೆ ಶಿವಸೇನಾ ಪ್ರಶ್ನೆ

ಮಹಾರಾಷ್ಟ್ರ ರಾಜಕೀಯ

ಪಿಟಿಐ
Published 2 ನವೆಂಬರ್ 2019, 9:36 IST
Last Updated 2 ನವೆಂಬರ್ 2019, 9:36 IST
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ (ಸಂಗ್ರಹ ಚಿತ್ರ)   

ಮುಂಬೈ:ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ಶಿವಸೇನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ‘ನಿಮಗೆ ಬೇಕಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲು ಅವರೇನು ನಿಮ್ಮ ಜೇಬಿನೊಳಗಿದ್ದಾರೆಯೇ’ ಎಂದು ಬಿಜೆಪಿಯನ್ನು ಶಿವಸೇನಾ ಖಾರವಾಗಿ ಪ್ರಶ್ನಿಸಿದೆ.

ನವೆಂಬರ್ 7ರ ಒಳಗಾಗಿ ಹೊಸ ಸರ್ಕಾರ ರಚನೆಯಾಗದಿದ್ದರೆ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಾಗಬಹುದು ಎಂದುಬಿಜೆಪಿ ನಾಯಕ ಸುಧೀರ್‌ ಮುನಗಂಟಿವಾರ್‌ ಶುಕ್ರವಾರ ಹೇಳಿದ್ದರು. ಇದು ಶಿವಸೇನಾ ಕೆಂಗಣ್ಣಿಗೆ ಗುರಿಯಾಗಿದೆ.

ಮುನಗಂಟಿವಾರ್‌ ಹೇಳಿಕೆ ಬೆದರಿಕೆಯೊಡ್ಡುವ ತಂತ್ರ ಎಂದೂ ಶಿವಸೇನಾ ಹೇಳಿದೆ.

‘ಮುನಗಂಟಿವಾರ್‌ ಬೆದರಿಕೆಯನ್ನು ಜನ ಏನೆಂದು ಅರ್ಥೈಸಿಕೊಳ್ಳಬೇಕು? ರಾಷ್ಟ್ರಪತಿಗಳು ನಿಮ್ಮ (ಬಿಜೆಪಿ) ಜೇಬಿನಲ್ಲಿದ್ದಾರೆ ಎಂದೇ ಅಥವಾ ರಾಷ್ಟ್ರಪತಿಗಳ ಮುದ್ರೆ ನಿಮ್ಮ ರಾಜ್ಯ ಕಚೇರಿಯಲ್ಲಿದೆ ಎಂದೇ’ ಎಂದು ಸೇನಾ ಪ್ರಶ್ನಿಸಿದೆ.

‘ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ ಎಂಬುದನ್ನು ಜನರಿಗೆ ತಿಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಿದ್ದಾರೆಯೇ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಪ್ರಶ್ನಿಸಲಾಗಿದೆ.

ಮುನಗಂಟಿವಾರ್‌ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಾಂವಿಧಾನಿಕವಾದದ್ದು. ಅವರಿಗೆ ಸಂವಿಧಾನ ಮತ್ತು ಕಾನೂನಿನ ಕುರಿತು ತಿಳಿವಳಿಕೆ ಇಲ್ಲದಿರುವುದನ್ನು ಸೂಚಿಸುತ್ತದೆ ಎಂದೂ ಸೇನಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.