ಮುಂಬೈ: ಮಹಾರಾಷ್ಟ್ರ–ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದ ಉನ್ನತಾಧಿಕಾರ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ಪುನರ್‌ರಚನೆ ಮಾಡಿದೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಸಮಿತಿ ಅಧ್ಯಕ್ಷರಾಗಿರುವರು. ಸಮಿತಿ ಪುನರ್‌ರಚನೆಗೆ ಸಂಬಂಧಿಸಿ ರಾಜ್ಯ ಸರ್ಕಾರ ಗುರುವಾರ ಅಧಿಸೂಚನೆ ಹೊರಡಿಸಿದೆ.
ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ, ಅಜಿತ್ ಪವಾರ್, ಎನ್‌ಸಿಪಿ(ಎಸ್‌ಪಿ) ವರಿಷ್ಠ ಶರದ್ ಪವಾರ್, ಕಾಂಗ್ರೆಸ್‌ನ ಹಿರಿಯ ನಾಯಕ ಪೃಥ್ವಿರಾಜ್ ಚವಾಣ್, ಲೋಕಸಭೆಯ ಬಿಜೆಪಿ ಸಂಸದ ನಾರಾಯಣ ರಾಣೆ, ಉನ್ನತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ, ಪ್ರವಾಸೋದ್ಯಮ ಸಚಿವ ಶಂಭುರಾಜ್ ದೇಸಾಯಿ, ಆರೋಗ್ಯ ಸಚಿವ ಪ್ರಕಾಶ ಅಬಿತ್ಕರ್ ಸೇರಿದಂತೆ 18 ಮಂದಿ ಸಮಿತಿ ಸದಸ್ಯರಾಗಿದ್ದಾರೆ.
ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಕೂಡ ಸಮಿತಿ ಸದಸ್ಯರಾಗಿದ್ದಾರೆ. ಆದರೆ, ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ, ವಿಪಕ್ಷ ನಾಯಕ ಸ್ಥಾನ ಖಾಲಿ ಇದೆ. ಇನ್ನು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಶಿವಸೇನಾದ(ಯುಬಿಟಿ) ಅಂಬಾದಾಸ್ ದನ್ವೆ ಅವರೂ ಈ ಸಮಿತಿ ಸದಸ್ಯರಾಗಿದ್ದಾರೆ.
2014ರಲ್ಲಿ ರಚನೆ: ಪೃಥ್ವಿರಾಜ್ ಚವಾಣ್ ಅವರು ಮುಖ್ಯಮಂತ್ರಿಯಾಗಿದ್ದಾಗ 2014ರ ಮೇ 26ರಂದು ಮೊದಲ ಬಾರಿಗೆ ಈ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿತ್ತು.
ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ, 2020ರ ಮೇ 2ರಂದು ಈ ಸಮಿತಿಯನ್ನು ಪುನರ್‌ರಚಿಸಲಾಗಿತ್ತು.
ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಅಲ್ಲದೇ, ಗಡಿಗೆ ಹೊಂದಿರುವ 814 ಗ್ರಾಮಗಳು ತನಗೆ ಸೇರಿದವು ಎಂದು ಮಹಾರಾಷ್ಟ್ರ ಹೇಳಿಕೊಳ್ಳುತ್ತಿದೆ. ಮರಾಠಿ ಭಾಷಿಕರ ಬಾಹುಳ್ಯವಿರುವ ಈ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂಬುದು ಆ ರಾಜ್ಯದ ನಾಯಕರ ಬೇಡಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.