ADVERTISEMENT

ದೇಶದ ಒಟ್ಟು ಕೋವಿಡ್ ಪ್ರಕರಣಗಳ ಶೇ 53ರಷ್ಟು ಕೇರಳ, ಮಹಾರಾಷ್ಟ್ರದಲ್ಲಿ: ಕೇಂದ್ರ

ಪಿಟಿಐ
Published 9 ಜುಲೈ 2021, 14:36 IST
Last Updated 9 ಜುಲೈ 2021, 14:36 IST
ಸಾಂದರ್ಭಿಕ ಚಿತ್ರ (ಕೃಪೆ– ಎಎಫ್‌ಪಿ)
ಸಾಂದರ್ಭಿಕ ಚಿತ್ರ (ಕೃಪೆ– ಎಎಫ್‌ಪಿ)   

ನವದೆಹಲಿ: ದೇಶದಾದ್ಯಂತ ಕಳೆದ ವಾರ ದೃಢಪಟ್ಟ ಕೋವಿಡ್ ಪ್ರಕರಣಗಳಲ್ಲಿ ಶೇ 53ರಷ್ಟು ಕೇರಳ ಮತ್ತು ಮಹಾರಾಷ್ಟ್ರದಲ್ಲಿ ವರದಿಯಾಗಿವೆ. ಸಾಂಕ್ರಾಮಿಕವು ಇನ್ನೂ ಕೊನೆಗೊಂಡಿಲ್ಲ, ಮೈಮರೆಯುವಂತಿಲ್ಲ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.

‘ದೇಶವು ಇನ್ನೂ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿದೆ. ಕೋವಿಡ್ ಸಾಂಕ್ರಾಮಿಕ ಕೊನೆಗೊಂಡಿದೆ ಎಂದು ತಪ್ಪಾಗಿ ಭಾವಿಸುವಂತಿಲ್ಲ’ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್‌ವಾಲ್ ಅವರು ರಷ್ಯಾ ಮತ್ತು ಬ್ರಿಟನ್‌ನಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿರುವುದನ್ನು ಉಲ್ಲೇಖಿಸಿದ್ದು, ಜನತೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ.

ADVERTISEMENT

ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ಕಳೆದ ವಾರ ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಶೇ 21 ಮಹಾರಾಷ್ಟ್ರದಲ್ಲಿ ಮತ್ತು ಶೇ 32ರಷ್ಟು ಕೇರಳದಲ್ಲಿ ವರದಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.

ದೇಶದ ಒಟ್ಟು ಪ್ರಕರಣಗಳ ಶೇ 80ರಷ್ಟು 15 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 90 ಜಿಲ್ಲೆಗಳಲ್ಲಿ ಪತ್ತೆಯಾಗಿದೆ. ಈ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ದೇಶದಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ 43,393 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, 911 ಮಂದಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.