ಕೃಷಿ ಸಚಿವ ಮಾಣಿಕ್‌ರಾವ್ ಕೊಕಾಟೆ ಅವರು ಮೊಬೈಲ್‌ನಲ್ಲಿ ರಮ್ಮಿ ಆಡುತ್ತಿರುವ ದೃಶ್ಯ
Credit: X/@RRPSpeaks
ಮುಂಬೈ: ‘ಒಂದೆಡೆ ರಾಜ್ಯದಲ್ಲಿ ನಿತ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಕೃಷಿ ಸಚಿವರು ಅಧಿವೇಶನದಲ್ಲಿಯೇ ಮೊಬೈಲ್‌ನಲ್ಲಿ ಆನ್‌ಲೈನ್ ಆಟವಾಡುವುದರಲ್ಲಿ ತಲ್ಲೀನರಾಗಿದ್ದಾರೆ’ ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ ಸಪ್ಕಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಹಾರಾಷ್ಟ್ರದಲ್ಲಿ ನಿತ್ಯ ಆರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ನಿರ್ಲಕ್ಷಿಸಿ, ಶಾಸನಭೆಯಲ್ಲಿ ಆನ್‌ಲೈನ್ ಆಟವಾಡುತ್ತಿದ್ದ ಕೃಷಿ ಸಚಿವ ಮಾಣಿಕರಾವ್ ಕೊಕಾಟೆ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
‘ಸಚಿವರ ವರ್ತನೆಯನ್ನು ಪ್ರಶ್ನಿಸುವ ಜನರ ಮೇಲೆ ಆಡಳಿತ ಪಕ್ಷದ ಕಾರ್ಯಕರ್ತರು ಹಲ್ಲೆ ನಡೆಸುತ್ತಿರುವುದು ಖಂಡನೀಯ. ಅದು ಅವರ ಉದ್ಧಟತನದ ವರ್ತನೆಯಾಗಿದೆ’ ಎಂದು ಅವರು ಕಿಡಿಕಾರಿದರು.
‘ಕೃಷಿ ಸಚಿವರು ಹಿಂದೆ ರೈತರನ್ನು ಭಿಕ್ಷುಕರು ಎಂದು ಕರೆದು ಅವಮಾನಸಿದ್ದರು. ಅಲ್ಲದೆ ಸಾಲ ಮನ್ನಾದ ಮೊತ್ತವನ್ನು ರೈತರು ವಿವಾಹ ಕಾರ್ಯಗಳಿಗೆ ಖರ್ಚು ಮಾಡುತ್ತಾರೆ ಎಂದೂ ಜರೆದಿದ್ದರು. ಅಷ್ಟು ಸಾಲದು ಎಂಬಂತೆ ಈಗ ಶಾಸನಸಭೆಯಲ್ಲಿ ಆನ್‌ಲೈನ್ ಆಟದಲ್ಲಿ ತಲ್ಲೀನರಾಗಿದ್ದಾರೆ. ಇವರ ಈ ವರ್ತನೆಯನ್ನು ಪ್ರಶ್ನಿಸಿ, ಪ್ರತಿಭಟಿಸುವುದರಲ್ಲಿ ಏನು ತಪ್ಪಿದೆ’ ಎಂದು ಸಪ್ಕಲ್ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.
‘ರಾಜ್ಯದಲ್ಲಿ ಪ್ರಜಾಪ್ರಭುತ್ವ ಇಲ್ಲ, ಬದಲಿಗೆ ಗಲಭೆ ನಡೆಸುವ ಗುಂಪಿನ ಆಡಳಿತ ನಡೆಯುತ್ತಿದೆ. ಶಾಸಕರಷ್ಟೇ ಅಲ್ಲ ಸಚಿವರು ಮತ್ತು ಆ ಪಕ್ಷಗಳ ಪದಾಧಿಕಾರಿಗಳು ಸಹ ಅಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಗಮನ ಹರಿಸಿ, ಕ್ರಮ ತೆಗೆದುಕೊಳ್ಳುವ ಧೈರ್ಯ ತೋರಬೇಕು ಎಂದು ಅವರು ಹೇಳಿದ್ದಾರೆ.
ಏನಿದು ಪ್ರಕರಣ: ಕೃಷಿ ಸಚಿವ ಮಾಣಿಕರಾವ್ ಕೊಕಾಟೆ ಅವರು ಮುಂಗಾರು ಅಧಿವೇಶನದಲ್ಲಿ ಸದನದೊಳಗೆ ಕಲಾಪದ ಅವಧಿಯಲ್ಲಿ ಆನ್‌ಲೈನ್ ರಮ್ಮಿ ಆಡುತ್ತಿದ್ದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿತ್ತು. ಈ ಕುರಿತು ವಿವಿಧ ಪಕ್ಷಗಳ ನಾಯಕರು ಮತ್ತು ಸಾರ್ವಜನಿಕರಿಗೆ ತೀವ್ರ ಟೀಕೆ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ್ದ ಕೊಕಟೆ ಅವರು, ‘ತನ್ನ ಮೊಬೈಲ್‌ನಲ್ಲಿ ಇದ್ದಕ್ಕಿದ್ದಂತೆ ಆನ್‌ಲೈನ್ ಆಟವೊಂದು ಡೌನ್‌ಲೋಡ್ ಆಗುತ್ತಿತ್ತು. ಅದನ್ನು ತಡೆಯಲು ನಾನು ಪ್ರಯತ್ನಿಸುತ್ತಿದ್ದೆ’ ಎಂದು ಹೇಳಿದ್ದರು.
ಕೃಷಿ ಸಚಿವರ ಹಿಂದಿನ ಹೇಳಿಕೆಗಳು ಮತ್ತು ಈಚಿನ ನಡವಳಿಕೆಗಳನ್ನು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಗಂಭೀರವಾಗಿ ಪರಿಗಣಿಸಿದ್ದು ಸ್ಪಷ್ಟ ಸೂಚನೆಗಳನ್ನು ನೀಡಲಿದ್ದಾರೆ–ಸುನಿಲ್ ತತ್ಕರೆ, ಎನ್‌ಸಿಪಿ ಹಿರಿಯ ನಾಯಕ
ಯುವ ಘಟಕದ ಅಧ್ಯಕ್ಷರ ರಾಜೀನಾಮೆ ಕೇಳಿದ ಪವಾರ್
ಮುಂಬೈ: ಮಹಾರಾಷ್ಟ್ರದ ಕೃಷಿ ಸಚಿವ ಮಾಣಿಕರಾವ್ ಕೊಕಾಟೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟಿಸಿದ ಛಾವಾ ಸಂಘಟನೆ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಎನ್‌ಸಿಪಿ ನಾಯಕರು ಮತ್ತು ಕಾರ್ಯಕರ್ತರ ಕ್ರಮವನ್ನು ಎನ್‌ಸಿಪಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಈ ಘಟನೆ ಬೆನ್ನಲ್ಲೇ ಅಜಿತ್ ಪವಾರ್ ಅವರು ಎನ್‌ಸಿಪಿಯ ಯುವ ಘಟಕದ ಅಧ್ಯಕ್ಷ ಸೂರಜ್ ಚವಾಣ್ ಅವರಿಗೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಅವರು ಸೋಮವಾರ ಸೂಚಿಸಿದ್ದಾರೆ.
‘ಚವಾಣ್ ಅವರ ನಡವಳಿಕೆಯು ಪಕ್ಷದ ಮೌಲ್ಯಗಳಿಗೆ ವಿರುದ್ಧವಾಗಿದ್ದು ಅದನ್ನು ಸಹಿಸಲು ಆಗುವುದಿಲ್ಲ. ಭಾನುವಾರದ ಘಟನೆ ಖಂಡನೀಯವಾಗಿದ್ದು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.