ADVERTISEMENT

ಅರ್ನಾಬ್‌ ಮೇಲಿನ ದಾಳಿಯಲ್ಲಿ ಕಾಂಗ್ರೆಸ್‌ ಪಾತ್ರವಿಲ್ಲ: ಮಹಾರಾಷ್ಟ್ರ ಸಚಿವ 

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 6:22 IST
Last Updated 23 ಏಪ್ರಿಲ್ 2020, 6:22 IST
   

ನಾಗಪುರ: ಪತ್ರಕರ್ತ,ರಿಪಬ್ಲಿಕ್ ಸುದ್ದಿ‌ ವಾಹಿನಿಯ ಸಂಪಾದಕ ಅರ್ನಾಬ್‌ ಗೋಸ್ವಾಮಿ ಮತ್ತು ಪತ್ನಿಯ ಮೇಲೆ ನಡೆದ ದಾಳಿಯಲ್ಲಿ ಕಾಂಗ್ರೆಸ್‌ನ ಪಾತ್ರವಿಲ್ಲ ಎಂದು ಮಹಾರಾಷ್ಟ್ರ ಇಂಧನ ಸಚಿವ ಡಾ. ನಿತಿನ್‌ ರಾವತ್‌ ಹೇಳಿದ್ದಾರೆ. ಅಲ್ಲದೆ, ಇದೆಲ್ಲವೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಎಂದು ಅವರು ಹೇಳಿದ್ದಾರೆ.

‘ಕಾಂಗ್ರೆಸ್‌ ಅನ್ನು ಸ್ಥಾಪಿಸಿದ್ದು ರಾಷ್ಟ್ರಪಿತ ಮಹಾತ್ಮ ಗಾಂಧಿ. ಕಾಂಗ್ರೆಸ್‌ ಯಾವತ್ತೂ ಈ ರೀತಿ ನಡೆದುಕೊಂಡಿಲ್ಲ. ಹೀಗಾಗಿ ಈ ಘಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪಾತ್ರವಿಲ್ಲ,’ ಎಂದು ರಾವತ್‌ ಹೇಳಿದ್ದಾರೆ.

‘ಆದರೆ, ಅಸಭ್ಯ ಪದಗಳ ಮೂಲಕ ಅರ್ನಾಬ್‌ ಗೋಸ್ವಾಮಿ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಅಪಮಾನಿಸಿದ್ದಾರೆ. ಇದು ಮಹಿಳೆಯೊಬ್ಬರಿಗೆ ಮಾಡಿದ ಅಪಮಾನವಲ್ಲ. ಬದಲಿಗೆ, ಇಡೀ ರಾಷ್ಟ್ರಕ್ಕೆ ಮಾಡಿದ ಅಪಮಾನ. ಇದಕ್ಕೆಲ್ಲ ಅರ್ನಾಬ್‌ಗೆ ಅಧಿಕಾರ ಕೊಟ್ಟವರು ಯಾರು? ಅರ್ನಾಬ್‌ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರು ಟಿ.ವಿಯ ಆ್ಯಂಕರ್‌ ಆಗಿರಲು ಯೋಗ್ಯರೇ ಅಲ್ಲ,’ ಎಂದು ರಾವತ್‌ ಟೀಕಿಸಿದ್ದಾರೆ.

ADVERTISEMENT

ಸೋನಿಯಾ ಗಾಂಧಿ ವಿರುದ್ಧದ ಅವರ ಮಾತುಗಳಿಗೆ ಸಂಬಂಧಿಸಿದಂತೆ ಅರ್ನಾಬ್‌ ಗೋಸ್ವಾಮಿ ಅವರ ವಿರುದ್ಧ ‘ಎಡಿಟರ್‌ ಗಿಲ್ಡ್‌’ಗೆ ದೂರು ನೀಡಲಾಗುವುದು.

‘ಅರ್ನಾಬ್‌ ಮಾತುಗಳನ್ನು ನಾವು ಖಂಡಿಸುತ್ತೇವೆ. ಅವರ ಮಾತುಗಳು ಪ್ರಚೋದನಕಾರಿ,’ ಎಂದು ಅವರು ರಾವತ್‌ಆರೋಪಿಸಿದ್ದಾರೆ.

ಇಂದು ಮುಂಜಾನೆ ಇಬ್ಬರು ದುಷ್ಕರ್ಮಿಗಳು ತಮ್ಮ ಮೇಲೆ ದಾಳಿ ಮಾಡಿದ್ದಾಗಿ ಅರ್ನಾಬ್‌ ಗೋಸ್ವಾಮಿ ಪೊಲೀಸರಿಗೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.