ADVERTISEMENT

ಶಾಸಕರು ಸ್ವ ಇಚ್ಛೆಯಿಂದಲೇ ನಮ್ಮ ಜತೆ ಬಂದಿದ್ದಾರೆ: ಏಕನಾಥ ಶಿಂಧೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 15:34 IST
Last Updated 28 ಜೂನ್ 2022, 15:34 IST
ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಏಕನಾಥ ಶಿಂಧೆ – ಪಿಟಿಐ ಚಿತ್ರ
ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಏಕನಾಥ ಶಿಂಧೆ – ಪಿಟಿಐ ಚಿತ್ರ   

ಮುಂಬೈ: ಎಲ್ಲ ಶಾಸಕರು ಸ್ವ ಇಚ್ಛೆಯಿಂದಲೇ ನಮ್ಮ ಜತೆ ಬಂದಿದ್ದಾರೆ ಎಂದು ಗುವಾಹಟಿಯ ಐಷಾರಾಮಿ ಹೋಟೆಲ್‌ನಲ್ಲಿ ಬೀಡುಬಿಟ್ಟಿರುವ ಶಿವಸೇನಾ ನಾಯಕ ಏಕನಾಥ ಶಿಂಧೆ ಹೇಳಿದ್ದಾರೆ.

ಶಿವಸೇನಾ ಶಾಸಕರನ್ನು ಅಪಹರಿಸಲಾಗಿದೆ, ಶಾಸಕರಿಗೆ ಹಣದ ಆಮಿಷವೊಡ್ಡಲಾಗಿದೆ ಎಂಬ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ.

‘ನಾವೆಲ್ಲ ಶಿವ ಸೈನಿಕರು. ನಾವು ಬಾಳಾಸಾಹೇಬ್ ಠಾಕ್ರೆ ಅನುಯಾಯಿಗಳು. ಹಿಂದುತ್ವವನ್ನು ಮುಂದಕ್ಕೊಯ್ಯಲಿದ್ದೇವೆ’ ಎಂದು ಪತ್ರಕರ್ತರ ಜತೆ ಮಾತನಾಡುವ ಸಂದರ್ಭ ಶಿಂಧೆ ಹೇಳಿದ್ದಾರೆ.

ಎಲ್ಲ ಶಾಸಕರು ಸ್ವ ಇಚ್ಛೆಯಿಂದ ಗುವಾಹಟಿಗೆ ತೆರಳಿಲ್ಲ ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ, ಸಂಜಯ್ ರಾವುತ್ ಹೇಳಿದ್ದರು.

‘50 ಮಂದಿ ಶಾಸಕರು ಅವರ ಇಚ್ಛೆಯ ಮೇರೆಗೆ ಬಂದಿದ್ದಾರೆ. ಹಿಂದುತ್ವದ ಧ್ಯೇಯಕ್ಕಾಗಿ ಬಂದಿದ್ದಾರೆ’ ಎಂದು ಶಿಂಧೆ ಹೇಳಿದ್ದಾರೆ.

ಇದಕ್ಕೂ ಮುನ್ನ ಅವರು, ನಿಮ್ಮ ಸಂಪರ್ಕದಲ್ಲಿರುವ ಒಬ್ಬ ಬಂಡಾಯ ಶಾಸಕನನ್ನು ಹೆಸರಿಸಿ ಎಂದು ಶಿವಸೇನಾ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪಕ್ಷದ ಬಂಡಾಯ ನಾಯಕ ಏಕನಾಥ ಶಿಂಧೆ ಸವಾಲು ಹಾಕಿದ್ದರು. ಗುವಾಹಟಿಯ ಹೋಟೆಲ್‌ನಲ್ಲಿರುವ ಬಂಡಾಯ ಶಾಸಕರ ಪೈಕಿ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ ಹಾಗೂ ಸಂಜಯ್ ರಾವುತ್ ಹೇಳಿಕೆಗಳಿಗೆ ಶಿಂಧೆ, ಈ ಮೂಲಕ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.