ADVERTISEMENT

ಸೋನಿಯಾ ಗಾಂಧಿಗೆ ತಲೆಬಾಗಿದ ಶಿವಸೇನಾ ಹಿಂದುತ್ವ: ಫಡಣವೀಸ್ ವಾಗ್ದಾಳಿ

ಬರಲಿರುವುದು ಮೂರು ಚಕ್ರದ ಸರ್ಕಾರ ಎಂದು ಟೀಕೆ

ಏಜೆನ್ಸೀಸ್
Published 26 ನವೆಂಬರ್ 2019, 11:01 IST
Last Updated 26 ನವೆಂಬರ್ 2019, 11:01 IST
ದೇವೇಂದ್ರ ಫಡಣವೀಸ್ ಪತ್ರಿಕಾಗೋಷ್ಠಿ –ಎಎನ್‌ಐ ಚಿತ್ರ
ದೇವೇಂದ್ರ ಫಡಣವೀಸ್ ಪತ್ರಿಕಾಗೋಷ್ಠಿ –ಎಎನ್‌ಐ ಚಿತ್ರ   

ಮುಂಬೈ:ಶಿವಸೇನಾ ಹಿಂದುತ್ವವು ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮುಂದೆ ತಲೆಬಾಗಿದೆ ಎಂದು ಮಹಾರಾಷ್ಟ್ರ ಹಂಗಾಮಿ ಮುಖ್ಯಮಂತ್ರಿದೇವೇಂದ್ರ ಫಡಣವೀಸ್ ಟೀಕಿಸಿದರು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಿವಸೇನಾ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ತಾನು ಹಿಂದುತ್ವಕ್ಕೆ ಬದ್ಧ ಎಂದುಶಿವಸೇನಾ ಹೇಳಿಕೊಳ್ಳುತ್ತದೆ. ಆದರೆ ಈಗ ಅದರ ಸಿದ್ಧಾಂತ ಸೋನಿಯಾ ಪದತಲಕ್ಕೆ ಸಮರ್ಪಣೆಯಾಗಿದೆ.ಮುಂದೆ ಬರಲಿರುವುದು ಮೂರು ಚಕ್ರದ ಸರ್ಕಾರ’ ಎಂದು ಲೇವಡಿ ಮಾಡಿದರು.

ಶಿವಸೇನಾ ಅವಕಾಶವಾದಿ ರಾಜಕಾರಣ ಮಾಡುತ್ತಿದೆ.ಬಿಜೆಪಿ–ಶಿವಸೇನಾ ಮೈತ್ರಿಯ ‘ಮಹಾಯುತಿ’ಗೆ ಮಹಾರಾಷ್ಟ್ರದ ಜನರು ಬಹುಮತ ಕೊಟ್ಟಿದ್ದರು. ನಮ್ಮ ಹಿಂದಿನ ಆಡಳಿತ ಮೆಚ್ಚಿ ಜನರು ನಮಗೆ ಜನಾದೇಶ ಕೊಟ್ಟಿದ್ದರು. ಅದಕ್ಕಾಗಿ ಅವರಿಗೆ ನಾವು ಅಭಾರಿಗಳು. ಬಿಜೆಪಿ ಸ್ಪರ್ಧಿಸಿದ್ದ ಶೇ 70 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ ದುರ್ದೈವದಿಂದ ನಂಬರ್‌ ಗೇಂನಲ್ಲಿ ನಮಗೆ ಅಧಿಕಾರ ತಪ್ಪಿತು. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆಪಟ್ಟುಶಿವಸೇನಾ ಬೇರೆ ಪಕ್ಷದೊಂದಿಗೆ ಈಗ ಮೈತ್ರಿ ಮಾಡಿಕೊಂಡಿದೆ ಎಂದು ಫಡಣವೀಸ್ ಹೇಳಿದರು.

ಶಿವಸೇನಾಗೆ ಮುಖ್ಯಮಂತ್ರಿ ಸ್ಥಾನ ಕೊಡುತ್ತೇವೆ ಅಂತ ನಾವೆಂದೂ ಮಾತು ಕೊಟ್ಟಿರಲಿಲ್ಲ. ಆದರೆ ಫಲಿತಾಂಶ ಪ್ರಕಟವಾದ ದಿನದಿಂದ ಶಿವಸೇನಾ ಇದೇ ಮಾತು ಆಡುತ್ತಾ ಬಂತು. ಶಿವಸೇನಾ ನಾಯಕರ ‘ಮಾತೋಶ್ರೀ’ ಬಾಗಿಲು ಬಿಜೆಪಿಗೆ ಎಂದೂ ತೆರೆಯಲಿಲ್ಲ. ನಮ್ಮೊಡನೆ ಅವರು ಸರಿಯಾಗಿ ಮಾತನ್ನೂ ಆಡಲಿಲ್ಲ. ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಾಯಕರ ಜೊತೆಗೆ ತಾವಾಗಿಯೇ ಹೊರಗೆ ಹೋಗಿ ಮಾತನಾಡಿದರು ಎಂದು ಫಡಣವೀಸ್ ದೂರಿದರು.

ಕಳೆದ ಐದು ವರ್ಷಗಳಲ್ಲಿ ನನ್ನ ಆಡಳಿತ ನನಗೆ ತೃಪ್ತಿ ಕೊಟ್ಟಿದೆ. ರೈತರು, ಗ್ರಾಮೀಣಾಭಿವೃದ್ಧಿ, ನೀರಾವರಿ, ಮುಂಬೈ ಮಹಾನಗರ ಅಭಿವೃದ್ಧಿಯ ವಿಚಾರದಲ್ಲಿ ನಾನು ಮಾಡಿದ ಕೆಲಸ ನನಗೆ ತೃಪ್ತಿ ಕೊಟ್ಟಿದೆ. ನನಗೆ ಅವಕಾಶ ಕೊಟ್ಟಿದ್ದಕ್ಕೆ ಮಹಾರಾಷ್ಟ್ರದ ಜನರಿಗೆ ನಾನು ಅಭಾರಿಯಾಗಿದ್ದೇನೆ.ಕುದುರೆ ವ್ಯಾಪಾರವನ್ನು ನಾವು ಒಪ್ಪುವುದೂ ಇಲ್ಲ, ಬೆಂಬಲಿಸುವುದೂ ಇಲ್ಲ. ಹೀಗಾಗಿ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.