ADVERTISEMENT

ಮಹಾರಾಷ್ಟ್ರ: ಮಳೆ ಅನಾಹುತಕ್ಕೆ 12 ಮಂದಿ ಸಾವು; ಹಲವು ರಾಜ್ಯಗಳಲ್ಲಿ ಮಳೆ ಅಬ್ಬರ

ದೇಶದ ದಕ್ಷಿಣ–ಪಶ್ಚಿಮ ಭಾಗದ ಹಲವೆಡೆ ಮಳೆ ಅಬ್ಬರ

ಪಿಟಿಐ
Published 28 ಆಗಸ್ಟ್ 2025, 18:10 IST
Last Updated 28 ಆಗಸ್ಟ್ 2025, 18:10 IST
<div class="paragraphs"><p>ಬಿಹಾರದ ಪಟ್ನಾದಲ್ಲಿ ಗುರುವಾರ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಬೋಟ್‌ ಮೂಲಕ ಕರೆತರಲಾಯಿತು </p></div>

ಬಿಹಾರದ ಪಟ್ನಾದಲ್ಲಿ ಗುರುವಾರ ಪ್ರವಾಹದಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಬೋಟ್‌ ಮೂಲಕ ಕರೆತರಲಾಯಿತು

   

–ಪಿಟಿಐ ಚಿತ್ರ

ಮುಂಬೈ/ಹೈದರಾಬಾದ್: ಮಹಾರಾಷ್ಟ್ರ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಭಾರಿ ಮಳೆ ಮುಂದುವರೆದಿದೆ. ಬುಧವಾರ ಮತ್ತು ಗುರುವಾರ ಮಹಾರಾಷ್ಟ್ರದ ಹಲವೆಡೆ ಸಂಭವಿಸಿದ ಮಳೆ ಸಂಬಂಧಿತ ಅವಘಡಗಳಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿದ್ದಾರೆ. 

ADVERTISEMENT

ವಾಣಿಜ್ಯ ನಗರಿ ಮುಂಬೈನಲ್ಲಿ ಗುರುವಾರ ಭಾರಿ ಮಳೆ ಸುರಿಯಿತು. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು.

ವಿಕೋಪ ಪರಿಹಾರ ಇಲಾಖೆ ಪ್ರಕಾರ ನಾಗಪುರದಲ್ಲಿ ಸಿಡಿಲು ಬಡಿದು ನಾಲ್ವರು ಸಾವಿಗೀಡಾಗಿದ್ದಾರೆ. ಬೀಡ್‌ನಲ್ಲಿ ಪ್ರವಾಹದ ನೀರಿನಲ್ಲಿ ಇಬ್ಬರು ಕೊಚ್ಚಿ ಹೋಗಿದ್ದಾರೆ. ನಾಸಿಕ್‌ ಜಿಲ್ಲೆಯಲ್ಲಿ ಸಿಡಿಲಿಗೆ ಒಬ್ಬರು ಬಲಿಯಾಗಿದ್ದಾರೆ.

ಸರ್ಕಾರದ ಮಾಹಿತಿಯಂತೆ ಆಗಸ್ಟ್‌ ತಿಂಗಳಲ್ಲಿ 23 ಲಕ್ಷ ಎಕರೆ ಬೆಳೆ ಮಳೆಯಿಂದಾಗಿ ನಾಶವಾಗಿದೆ. ನಾಂದೆಡ್ ಜಿಲ್ಲೆಯಲ್ಲಿ ಭಾರಿ ಹಾನಿ ಸಂಭವಿಸಿದೆ. 

ತೆಲಂಗಾಣದಲ್ಲೂ ಭಾರಿ ವರ್ಷಧಾರೆ: 

ತೆಲಂಗಾಣದ ಉತ್ತರ ಭಾಗದ ಜಿಲ್ಲೆಗಳಲ್ಲಿ ಬುಧವಾರ ಮತ್ತು ಗುರುವಾರ ಸುರಿದ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಾಮರೆಡ್ಡಿ, ಮೇಡಕ್‌, ನಿರ್ಮಲ್‌ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಗೋದಾವರಿ ನದಿಯ ಉಪನದಿಗಳಾದ ಮಂಜಿರಾ, ಕದಮ್ ಮತ್ತು ಸ್ವರ್ಣ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಅಕ್ಕಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ.

ತಗ್ಗು ಪ್ರದೇಶದಲ್ಲಿ ಮನೆಗಳು ಮುಳುಗಿದ್ದು, ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಮೇಡಕ್‌ ಜಿಲ್ಲೆಯಲ್ಲಿ ರಾಜ್ಯ ವಿಕೋಪ ಪರಿಹಾರ ತಂಡ 1000ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಿದೆ. ರಕ್ಷಣಾ ಕಾರ್ಯಕ್ಕೆ ಹೆಲಿಕಾಪ್ಟರ್‌ ಬಳಕೆ ಮಾಡಲಾಗಿದೆ. ಕಾಮರೆಡ್ಡಿ–ನಿಜಾಮಬಾದ್ ಜಿಲ್ಲೆಗಳನ್ನು ಹೈದರಾಬಾದ್‌ಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಪ್ರವಾಹದ ನೀರಿನಲ್ಲಿ ಮುಳುಗಿದೆ. ಹಲವು ಕಡೆ ರೈಲ್ವೆ ಹಳಿಗಳೂ ಜಲಾವೃತಗೊಂಡಿವೆ.

ರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಲು ಸಿರ್ಸಿಲ್ಲಾದಲ್ಲಿ ಸೇನೆಯ ನಾಲ್ಕು ಹೆಲಿಕಾಪ್ಟರ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿದೆ ಎಂದು ಕೇಂದ್ರದ ಗೃಹ ರಾಜ್ಯ ಸಚಿವ ಬಂಡಿ ಸಂಜಯ್‌ ತಿಳಿಸಿದ್ದಾರೆ.

 

ಕೇರಳದ ಆರು ಜಿಲ್ಲೆಗಳಲ್ಲಿ ಮಳೆ ಮುನ್ನೆಚ್ಚರಿಕೆ

ತಿರುವನಂತಪುರ: ಕೇರಳದಲ್ಲಿ ಗುರುವಾರ ಮಳೆ ಮತ್ತಷ್ಟು ತೀವ್ರಗೊಂಡಿದೆ. ಬಹುತೇಕ ಅಣೆಕಟ್ಟೆಗಳ ನೀರಿನ ಪ್ರಮಾಣ ಏರಿಕೆಯಾಗಿದೆ. ಹಲವೆಡೆ ಭೂಕುಸಿತ ಅವಘಡಗಳು ಸಂಭವಿಸಿವೆ. ಹವಾಮಾನ ಇಲಾಖೆ ಆರು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ. ಎರ್ನಾಕುಲಂ ತ್ರಿಶೂರ್ ಕೋಜಿಕೋಡ್‌ ವಯನಾಡ್‌ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್ ಇದ್ದು ಪಟ್ಟಣಂತಿಟ್ಟ ಇಡುಕ್ಕಿ ಪಾಲಕ್ಕಾಡ್ ಮತ್ತು ಮಲಪ್ಪುರಂ ಸೇರಿ ಐದು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ವಯನಾಡ್‌ನ ಥಮರಸ್ಸೇರಿ ಘಾಟ್‌ನಲ್ಲಿ ಸುಮಾರು 30 ಮೀಟರ್‌ ಭೂಕುಸಿತ ಉಂಟಾಗಿ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.  ಇಡುಕಿ ಸೇರಿ ಹಲವು ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಮುನ್ನೆಚ್ಚರಿಕೆ ಘೋಷಿಸಲಾಗಿದೆ. ಕೇರಳ ಮತ್ತು ಲಕ್ಷದ್ವೀಪ ಕರಾವಳಿ ಭಾಗದಲ್ಲಿ ಪ್ರಬಲ ಗಾಳಿ ಬೀಸಲಿದ್ದು ಗುರುವಾರ ಮತ್ತು ಶುಕ್ರವಾರ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.  ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸೆಪ್ಟೆಂಬರ್‌ 1ರವರೆಗೂ ಮುನ್ನೆಚ್ಚರಿಕೆ ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಭಾರತದಲ್ಲಿ ಪ್ರವಾಹ ಆರ್ಭಟ

ನವದೆಹಲಿ: ಉತ್ತರ ಭಾರತದ ಜಮ್ಮು–ಕಾಶ್ಮೀರ, ಬಿಹಾರ, ಪಂಜಾಬ್, ಒಡಿಶಾ, ಉತ್ತರ ಪ್ರದೇಶ, ಹಿಮಾಚಲಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆ ಮತ್ತು ಪ್ರವಾಹದಿಂದಾಗಿ ಜನರು ಪರದಾಡಿದರು. ಪ್ರಮುಖ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ಪರಿಣಾಮ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.