ADVERTISEMENT

ರಾಹುಲ್ ಅನರ್ಹತೆಗೆ ಖಂಡನೆ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗ

ಪಿಟಿಐ
Published 24 ಮಾರ್ಚ್ 2023, 11:08 IST
Last Updated 24 ಮಾರ್ಚ್ 2023, 11:08 IST
ರಾಹುಲ್‌ ಗಾಂಧಿ (ಪಿಟಿಐ ಚಿತ್ರ)
ರಾಹುಲ್‌ ಗಾಂಧಿ (ಪಿಟಿಐ ಚಿತ್ರ)   

ಮುಂಬೈ: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿರುವ ವಿರೋಧ ಪಕ್ಷಗಳ ನಾಯಕರು ಶುಕ್ರವಾರ ಸಭಾತ್ಯಾಗ ಮಾಡಿದ್ದಾರೆ.

ಮೋದಿ ಉಪನಾಮ ಕುರಿತಂತೆ 2019ರಲ್ಲಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಾಹುಲ್‌ ಗಾಂಧಿ ತಪ್ಪಿತಸ್ಥರು ಎಂದು ಸೂರತ್‌ ನ್ಯಾಯಾಲಯ ಗುರುವಾರವಷ್ಟೇ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ಇಂದು (ಶುಕ್ರವಾರ) ಲೋಕಸಭೆ ಕಾರ್ಯದರ್ಶಿ ಅವರು, ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ.

‌ಇದನ್ನು ಟೀಕಿಸಿರುವ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ಅವರು, 'ಲೋಕಸಭೆ ಸದಸ್ಯತ್ವದಿಂದ ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿರುವ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ಪ್ರತಿಭಟನಾರ್ಥವಾಗಿ ಸಭಾತ್ಯಾಗ ಮಾಡಲು ನಿರ್ಧರಿಸಿದ್ದೇವೆ' ಎಂದಿದ್ದಾರೆ.

ADVERTISEMENT

ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ), ಶಿವಸೇನಾ (ಉದ್ಧವ್‌ ಠಾಕ್ರೆ ಬಣ) ಶಾಸಕರೂ ವಿಧಾನಭವನದ ಮೆಟ್ಟಿಲುಗಳ ಮೇಲೆ ಪ್ರತಿಭಟನೆ ನಡೆಸಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನಾ (ಏಕನಾಥ ಶಿಂದೆ ಬಣ) ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದೆ.

ವಿರೋಧ ಪಕ್ಷಗಳ ನಡೆಯನ್ನು ಟೀಕಿಸಿರುವ ಬಿಜೆಪಿ ಶಾಸಕ ಅತುಲ್‌ ಭಟ್ಖಲ್ಕರ್‌, ಸದಸ್ಯರು ತಪ್ಪಿತಸ್ಥರೆಂದು ಸಾಬೀತಾದರೆ ಅಂತಹವರನ್ನು ಅನರ್ಹಗೊಳಿಸುವ ಕಾನೂನನ್ನು ಕಾಂಗ್ರೆಸ್‌ ನೇತೃತ್ವದಲ್ಲಿ ಈ ಹಿಂದೆ ಅಸ್ತಿತ್ವದಲ್ಲಿದ್ದ ಯುನೈಟೆಡ್‌ ಪ್ರೊಗ್ರೆಸ್ಸಿವ್‌ ಅಲಯನ್ಸ್‌ (ಯಪಿಎ) ಸರ್ಕಾರವೇ ರೂಪಿಸಿತ್ತು. ಆ ಕಾನೂನನ್ನೇ ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದ್ದಾರೆ. ಹಾಗೆಯೇ, 'ಕಾಂಗ್ರೆಸ್‌ ಶಾಸಕರು ಸಭಾತ್ಯಾಗ ಮಾಡಿರುವುದು ಹಾಸ್ಯಾಸ್ಪದ' ಕುಟುಕಿದ್ದಾರೆ.

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್‌, 'ಕಳ್ಳರೆಲ್ಲರಿಗೂ ಸಾಮಾನ್ಯವಾಗಿ ಮೋದಿ ಎಂಬ ಉಪನಾಮವೇ ಏಕಿರುತ್ತದೆ' ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ಮೂಲಕ ರಾಹುಲ್‌ ಅವರು ಮೋದಿ ಉಪನಾಮ ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿದ್ದ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.