ADVERTISEMENT

ನರೇಗಾ ಯೋಜನೆ ನಾಶಪಡಿಸಲು ಯತ್ನ: ಮಲ್ಲಿಕಾರ್ಜುನ ಖರ್ಗೆ ಆರೋಪ

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 14:11 IST
Last Updated 16 ಜೂನ್ 2025, 14:11 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬಡವರ ಜೀವನಾಡಿಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ನರೇಗಾ) ನಾಶ ಮಾಡಲು ಪ್ರಯತ್ನಿಸುತ್ತಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘2025–26ರ ಹಣಕಾಸು ವರ್ಷದ ಮೊದಲಾರ್ಧಕ್ಕೆ ಅನುದಾನದ ಹಂಚಿಕೆಯ ಮಿತಿಯನ್ನು ಶೇ 60ಕ್ಕೆ ನಿಗದಿಪಡಿಸಿದೆ. ಕೆಲಸ ಮಾಡುವ ಹಕ್ಕನ್ನು ಕಸಿಯುವ ಇದು ಸಂವಿಧಾನ ವಿರೋಧಿ ಅಪರಾಧ’ ಎಂದು ಆರೋಪಿಸಿದ್ದಾರೆ.

‘ಮೋದಿ ಸರ್ಕಾರವು ಬಡವರ ಜೇಬಿನಿಂದ ₹25 ಸಾವಿರ ಕೋಟಿಯನ್ನು ಕಸಿಯಲು ಮುಂದಾಗಿದೆ’ ಎಂದು ದೂರಿದ್ದಾರೆ.

ADVERTISEMENT

‘ಇದು ಬೇಡಿಕೆ ಆಧಾರಿತ ಯೋಜನೆಯಾಗಿದ್ದು, ಒಂದು ವೇಳೆ, ವರ್ಷದ ಮೊದಲಾರ್ಧದಲ್ಲಿ ವಿಪತ್ತು ಅಥವಾ ಹವಾಮಾನ ವೈಪರೀತ್ಯದಂತಹ ಘಟನೆಗಳು ಸಂಭವಿಸಿದಾಗ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾದರೆ ಏನು ಮಾಡುವುದು? ಮಿತಿ ಹೇರುವುದರಿಂದ ಈ ಯೋಜನೆಯನ್ನೇ ನಂಬಿಕೊಂಡಿರುವ ಬಡವರ ಜೀವನಕ್ಕೆ ತೊಂದರೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಮಿತಿಯನ್ನು ದಾಟಿದರೆ ಏನಾಗುತ್ತದೆ? ಬೇಡಿಕೆಯ ಹೊರತಾಗಿಯೂ ಉದ್ಯೋಗವನ್ನು ನಿರಾಕರಿಸಲು ರಾಜ್ಯಗಳನ್ನು ಒತ್ತಾಯಿಸಲಾಗುತ್ತದೆಯೇ ಅಥವಾ ವೇತನವಿಲ್ಲದೆ ಕೂಲಿಕಾರರು ಕೆಲಸ ಮಾಡಬೇಕೆ’ ಎಂದು ಕೇಳಿದ್ದಾರೆ.

‘ಶೇ 7ರಷ್ಟು ಕುಟುಂಬಗಳು 100 ಮಾನವ ದಿನಗಳಷ್ಟು ಕೆಲಸ ಪಡೆದಿವೆ ಎಂಬ ವರದಿಯು ನಿಜವಲ್ಲ’ ಎಂದಿದ್ದಾರೆ.

‘ಆಧಾರ್‌ ಆಧಾರಿತ ಪಾವತಿಯ ಷರತ್ತಿನ ಮೇರೆಗೆ 7 ಕೋಟಿ ಕಾರ್ಮಿಕರನ್ನು ಈ ಯೋಜನೆಯಿಂದ ಏಕೆ ಹೊರಗಿಡಲಾಗಿದೆ? ಕಳೆದ 10 ವರ್ಷಗಳ ಒಟ್ಟು ಬಜೆಟ್‌ನಲ್ಲಿ ಈ ಯೋಜನೆಗೆ ಕಡಿಮೆ ಅನುದಾನ ಹಂಚಿಕೆಯನ್ನು ಏಕೆ ಮಾಡಲಾಗಿದೆ’ ಎಂದು ಪ್ರಶ್ನಿಸಿದ್ದಾರೆ.

‘ಈ ಯೋಜನೆಯಡಿ ಪ್ರತಿದಿನದ ಕನಿಷ್ಠ ಕೂಲಿ ₹400 ನಿಗದಿಪಡಿಸುವುದು ಹಾಗೂ ವರ್ಷಕ್ಕೆ ಕನಿಷ್ಠ 150 ದಿನ ಉದ್ಯೋಗ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.