ಅಧಿವೇಶನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಂಸತ್ತಿನಲ್ಲಿ ಚರ್ಚಿಸಲು ವಿರೋಧ ಪಕ್ಷಗಳು ಬಿಗಿಪಟ್ಟು ಹಿಡಿದಿವೆ. ಸಂಸತ್ತಿನಲ್ಲಿ ಚುನಾವಣಾ ಪ್ರಕ್ರಿಯೆಗಳಿಗೆ ಸಂಬಂಧಿಸಿ ಈ ಹಿಂದೆ ನಡೆದ ಚರ್ಚೆಗಳು, ಮಾಜಿ ಸಭಾಪತಿ ಜಗದೀಪ್ ಧನಕರ್ ಅವರ ಆದೇಶಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
‘ಈ ಚರ್ಚೆಯು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಹತ್ವದ್ದು’ ಎಂದೂ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಈ ಬಗ್ಗೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉಪ ಸಭಾಪತಿ ಹರಿವಂಶ್ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.
‘ಈ ಭೂಮಿ ಮೇಲಿರುವ ಎಲ್ಲ ವಿಚಾರಗಳ ಕುರಿತೂ ಇಲ್ಲಿ ಚರ್ಚೆ ನಡೆಸಬಹುದು. ಒಂದಕ್ಕೆ ಮಾತ್ರ ನಿರ್ಬಂಧ ಇದೆ. ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳ ವಾಗ್ದಂಡನೆ ವಿಚಾರದಲ್ಲಿ ಮಾತ್ರವೇ ಚರ್ಚೆ ಸಾಧ್ಯವಿಲ್ಲ’ ಎಂದು ರಾಜ್ಯಸಭೆಯ ಸಭಾಪತಿಯಾಗಿದ್ದ ಜಗದೀಪ್ ಧನಕರ್ ಅವರು 2023ರ ಜುಲೈ 21ರಂದು ಆದೇಶ ನೀಡಿದ್ದರು’ ಎಂದು ಖರ್ಗೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
‘ಯಾವುದೇ ಒಂದು ವಿಚಾರವು ನ್ಯಾಯಾಲಯದಲ್ಲಿ ಇದ್ದು, ಆ ಕುರಿತ ಚರ್ಚೆ ಸಾಧ್ಯವಿಲ್ಲ ಎನ್ನುವ ವಾದವನ್ನು ಧನಕರ್ ಅವರು ಒಪ್ಪಿರಲೇ ಇಲ್ಲ. ಸಭಾಪತಿಯೊಬ್ಬರು ಒಮ್ಮೆ ನೀಡಿದ ಆದೇಶವು ಸದಾ ಮೌಲ್ಯಯುತವಾಗಿರುತ್ತದೆ. ನೀವೇ ಹಲವು ಬಾರಿ ಈ ಹಿಂದಿನ ಸಭಾಪತಿ ನೀಡಿದ ಆದೇಶವನ್ನು ಉಲ್ಲೇಖಿಸಿದ್ದೀರಿ’ ಎಂದಿದ್ದಾರೆ.
‘ಕೋಟಿ ಕೋಟಿ ಮತದಾರರು ಮತ್ತು ಸಮಾಜದ ತಳವರ್ಗದ ಜನರ ಕುರಿತ ಪ್ರಮುಖ ವಿಚಾರ ಇದಾಗಿದೆ. ಆದ್ದರಿಂದ ನನ್ನ ಪರವಾಗಿ ಮತ್ತು ವಿರೋಧ ಪಕ್ಷಗಳ ಪರವಾಗಿ ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತ ಚರ್ಚೆಗೆ ತಕ್ಷಣವೇ ಅವಕಾಶ ನೀಡಿ’ ಎಂದು ಪತ್ರದಲ್ಲಿ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.