ADVERTISEMENT

ಪಶ್ಚಿಮ ಬಂಗಾಳ ರಾಜ್ಯಪಾಲರನ್ನು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿದ ಸಿಎಂ ಮಮತಾ

ಐಎಎನ್ಎಸ್
Published 1 ಫೆಬ್ರುವರಿ 2022, 2:48 IST
Last Updated 1 ಫೆಬ್ರುವರಿ 2022, 2:48 IST
ಜಗದೀಪ್ ಧನಕರ್ ಹಾಗೂ ಮಮತಾ ಬ್ಯಾನರ್ಜಿ
ಜಗದೀಪ್ ಧನಕರ್ ಹಾಗೂ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅಲ್ಲಿನ ರಾಜ್ಯಪಾಲ ಜಗದೀಪ್ ಧನಕರ್ ಅವರ ನಡುವಿನ ಜಗಳ ತಾರಕಕ್ಕೆ ಏರಿದೆ.

ಟ್ವಿಟರ್‌ನಲ್ಲಿ ರಾಜ್ಯಪಾಲರನ್ನು ಬ್ಲಾಕ್ ಮಾಡಿರುವ ಮಮತಾ ಬ್ಯಾನರ್ಜಿ ಧನಕರ್ ಬಗ್ಗೆ ಬಹಿರಂಗವಾಗಿಯೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಅವರು ದಿನ ನಿತ್ಯ ಟ್ವಿಟರ್‌ನಲ್ಲಿ ನಮ್ಮನ್ನು ಬೈಯುವುದೇ ಕಾಯಕವಾಗಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ಬ್ಲಾಕ್ ಮಾಡಿದ್ದೇನೆ’ ಎಂದು ಸಿಎಂ ಮಮತಾ ತಿಳಿಸಿದ್ದಾರೆ.

‘ಚುನಾವಣೆಯಲ್ಲಿ ಬಹುಮತ ಪಡೆದು, ಸಂವಿಧಾನಬದ್ಧವಾಗಿ ರಚನೆಯಾದ ಸರ್ಕಾರಕ್ಕೆ ರಾಜ್ಯಪಾಲರು ಅಡ್ಡಿಯುಂಟು ಮಾಡುತ್ತಿದ್ದು ಇದು ನಾಚಿಕೆಗೇಡಿನ ವಿಷಯ’ ಎಂದು ಹರಿಹಾಯ್ದಿದ್ದಾರೆ.

ADVERTISEMENT

‘ಅವರು (ಜಗದೀಪ್ ಧನಕರ್) ನಮ್ಮನ್ನು, ನಮ್ಮ ಅಧಿಕಾರಿಗಳನ್ನು ಗುಲಾಮರ ರೀತಿ ನೋಡಲು ಬಯಸುತ್ತಿದ್ದಾರೆ. ಟ್ವಿಟರ್‌ನಲ್ಲಿ ದಿನನಿತ್ಯ ನಮಗೆ ತೀವ್ರ ಇರಿಸುಮುರಿಸು ಉಂಟು ಮಾಡುತ್ತಿದ್ದರು’ ಎಂದು ಮಮತಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸೋಮವಾರವಷ್ಟೇ ಟಿಎಂಸಿ ಸಂಸದರು ಜಗದೀಪ್ ಧನಕರ್‌ ಅವರನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಹುದ್ದೆಯಿಂದ ವಜಾ ಮಾಡಬೇಕು ಎಂದು ಸಂಸತ್‌ನಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಆಗ್ರಹಿಸಿದ್ದರು.

‘ರಾಜ್ಯಪಾಲರ ನಡೆಯ ಬಗ್ಗೆ ನಾನು ಪ್ರಧಾನಿಯವರಿಗೆ ಸಾಕಷ್ಟು ಬಾರಿ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ರಾಜ್ಯಪಾಲರು ನಮ್ಮ ಯಾವುದೇ ಕಡತಗಳನ್ನು ವಿಲೇವಾರಿ ಮಾಡುತ್ತಿಲ್ಲ. ಹಠಮಾರಿ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾದರೆ ರಾಜ್ಯಕ್ಕೆ ಸಂಬಂಧಿಸಿದ ನೀತಿ ನಿರೂಪಣೆಗಳನ್ನು ಕಾರ್ಯಗತಗೊಳಿಸುವುದು ಹೇಗೆ? ಎಂದು ಮಮತಾ ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಜಗದೀಪ್ ಧನಕರ್ ಅವರು, ‘ಸಿಎಂ ಅವರು ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕು. ಜಗಳಗಂಟತನ ಯಾರಿಗೂ ಒಳ್ಳೆಯದಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.