ADVERTISEMENT

ರಾಜಕೀಯ ದ್ವೇಷಕ್ಕೆ ಬಲಿಪಶುವಾದ ಗಂಗೂಲಿ: ಬಿಜೆಪಿ ವಿರುದ್ಧ ಮಮತಾ ಆಕ್ರೋಶ

ಐಎಎನ್ಎಸ್
Published 20 ಅಕ್ಟೋಬರ್ 2022, 15:29 IST
Last Updated 20 ಅಕ್ಟೋಬರ್ 2022, 15:29 IST
ಸಮಾರಂಭವೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ ಮತ್ತು ಬಿಸಿಸಿಐ ಜಯ್‌ ಶಾ
ಸಮಾರಂಭವೊಂದರಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಸಿಸಿಐ ಮಾಜಿ ಅಧ್ಯಕ್ಷ ಗಂಗೂಲಿ ಮತ್ತು ಬಿಸಿಸಿಐ ಜಯ್‌ ಶಾ    

ಕೋಲ್ಕತ್ತ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಅವರ ಹೆಸರನ್ನು ಬಿಸಿಸಿಐ ಅನುಮೋದಿಸದಿರುವುದಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಗಂಗೂಲಿ ಅವರನ್ನು ರಾಜಕೀಯ ದ್ವೇಷಕ್ಕೆ ಬಲಿಪಶು ಮಾಡಿದೆ ಎಂದು ಹೇಳುತ್ತಿದೆ.

‘ನನಗೆ ಕೆಲವು ಪ್ರಶ್ನೆಗಳಿವೆ. ಐಸಿಸಿಯಲ್ಲಿ ಯಾರಿಗೆ ಸ್ಥಾನ ಕಾದಿರಸಲಾಗಿದೆ? ಯಾರ ಹಿತಾಸಕ್ತಿಗಾಗಿ ಸೌರವ್ ಅವರನ್ನು ಬಲಿಪಶು ಮಾಡಲಾಯಿತು? ಅವರು ರಾಜಕೀಯ ದ್ವೇಷಕ್ಕೆ ಏಕೆ ಬಲಿಯಾದರು? ಭಾರತೀಯ ಕ್ರಿಕೆಟ್ ರಂಗ ಇದರಿಂದ ನಷ್ಟ ಅನುಭವಿಸುವುದಿಲ್ಲವೇ? ಇದು ನಾಚಿಕೆಗೇಡಿನ ರಾಜಕೀಯ ಸೇಡು’ ಎಂದು ಗುರುವಾರ ಬಿಜೆಪಿ ವಿರುದ್ಧ ಕಿಡಿ ಕಾರಿದರು.

ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೆ ಅವರನ್ನೇ ಹುದ್ದೆಯಲ್ಲಿ ಮುಂದುವರಿಸುವುದಕ್ಕೆ ಬಿಸಿಸಿಐ ಹಸಿರು ನಿಶಾನೆ ತೋರಿದ ಹಿನ್ನೆಲೆಯಲ್ಲಿ ಮಮತಾ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಆದರೆ, ಅವರು ಎಲ್ಲಿಯೂ ಗೃಹ ಸಚಿವ ಅಮಿತ್ ಶಾ ಅವರ ಪುತ್ರ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅವರ ಹೆಸರನ್ನು ಪ್ರಸ್ತಾಪಿಸಿಲ್ಲ.

ADVERTISEMENT

ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಅವರು ಮತ್ತೊಂದು ಅವಧಿಗೆ ಮುಂದುವರಿಯುವುದಿಲ್ಲ ಎಂಬುದು ತಿಳಿಯುತ್ತಲೇ ಪ್ರತಿಕ್ರಿಯೆ ನೀಡಿದ್ದ ಮಮತಾ, ತಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವುದಾಗಿ ಹೇಳಿದ್ದರು. ಈ ಮೂಲಕ ಗಂಗೂಲಿ ಅವರು ಐಸಿಸಿ ಅಧ್ಯಕ್ಷರಾಗುವುದಕ್ಕೆ ಶ್ರಮಿಸುವುದಾಗಿಯೂ ತಿಳಿಸಿದ್ದರು.

ಈ ಕುರಿತು ಕೇಂದ್ರದ ಹಲವು ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ಗುರುವಾರ ಮಮತಾ ತಿಳಿಸಿದರು.

‘ನಾನು ಸ್ಪಷ್ಟವಾದ ಸಂದೇಶವನ್ನು ಕಳುಹಿಸಿದ್ದೇನೆ. ಇವೆಲ್ಲದರ ನಂತರವೂ ಸೌರವ್ ಅವರನ್ನು ಈ ರೀತಿ ಅವಮಾನಿಸಲಾಗಿದೆ. ಅವರು ಅತ್ಯಂತ ಸಭ್ಯ ವ್ಯಕ್ತಿ. ತಮ್ಮ ದುಃಖವನ್ನು ಅವರು ಬಹಿರಂಗವಾಗಿ ವ್ಯಕ್ತಪಡಿಸುವುದಿಲ್ಲ. ಆದರೆ ಖಂಡಿತವಾಗಿಯೂ ಅವರಿಗೆ ನೋವಾಗಿದೆ’ ಎಂದು ಮಮತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.