ADVERTISEMENT

ಮಮತಾಗೆ ಬಂಗಾಳದ ಅಭಿವೃದ್ಧಿಯಲ್ಲಿ ಆಸಕ್ತಿಯಿಲ್ಲ: ಆದಿತ್ಯನಾಥ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 11:44 IST
Last Updated 25 ಮಾರ್ಚ್ 2021, 11:44 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್   

ಕೋಲ್ಕತ್ತ: ಪಶ್ಚಿಮ ಬಂಗಾಳ ಅಭಿವೃದ್ಧಿಯ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸಕ್ತಿ ಹೊಂದಿಲ್ಲ. ಅವರು ಕೇವಲ ಗೂಂಡಾ ಮತ್ತು ಸುಲಿಗೆ ಮಾಡುವವರನ್ನು ಉತ್ತೇಜಿಸಲು ಬಯಸುತ್ತಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಯೋಗಿ ಆದಿತ್ಯನಾಥ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಡಳಿತದ ಅಂತ್ಯದ ಕ್ಷಣಗಣನೆ ಆರಂಭವಾಗಿದ್ದು, ಅಭಿವೃದ್ಧಿ ಮತ್ತು ಪ್ರಗತಿಯ ಹೊಸ ಯುಗಕ್ಕೆ ನಾಂದಿ ಹಾಡಲು ಬಿಜೆಪಿ ರಾಜ್ಯದಲ್ಲಿ ಹೊಸ ಸರ್ಕಾರ ರಚಿಸಲಿದೆ ಎಂದು ಹೇಳಿದ್ದಾರೆ.

ADVERTISEMENT

ಒಂದು ಕಾಲದಲ್ಲಿ ಪಶ್ಚಿಮ ಬಂಗಾಳ ಮುಂದುವರಿದ ಮತ್ತು ಪ್ರಗತಿಪರ ರಾಜ್ಯವಾಗಿತ್ತು. ಆದರೆ ಕಾಂಗ್ರೆಸ್, ಎಡರಂಗ ಮತ್ತು ಟಿಎಂಸಿ ರಾಜ್ಯದ ಕೈಗಾರಿಕಾ ಬೆಳವಣಿಗೆಯನ್ನು ಕಂಠಿತಗೊಳಿಸಿತ್ತು. ಬಳಿಕ ಭ್ರಷ್ಟಾಚಾರ ಮನೆ ಮಾಡಿತು ಎಂದು ಆರೋಪಿಸಿದ್ದಾರೆ.

ಅಂಫಾನ್ ಚಂಡಮಾರುತದ ಬಳಿಕ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಟಿಎಂಸಿ ದುರುಪಯೋಗಪಡಿಸಿಕೊಂಡಿದೆ ಎಂದವರು ಟೀಕೆ ಮಾಡಿದ್ದಾರೆ.

ಅಂಫಾನ್ ಚಂಡಮಾರುತದ ಬಳಿಕ ಪ್ರಧಾನಿ ಮೋದಿ 1,000 ಕೋಟಿ ರೂ. ನೆರವು ಬಿಡುಗಡೆ ಮಾಡಿದ್ದರು. ಆದರೆ ಆ ಹಣವು ಜನರನ್ನು ತಲುಪಲಿಲ್ಲ. ಟಿಎಂಸಿ ನಾಯಕರುವಶಪಡಿಸಿದ್ದಾರೆ ಎಂದು ಆರೋಪಿಸಿದರು.

'ಪಿಎಂ ಆವಾಸ್ ಯೋಜನೆ', 'ಉಜ್ವಲ ಯೋಜನೆ', 'ಆಯುಷ್ಮಾನ್ ಭಾರತ್' ಮತ್ತು 'ಕಿಸಾನ್ ಸಮ್ಮಾನ್ ನಿಧಿ' ಮುಂತಾದ ಕೇಂದ್ರ ಯೋಜನೆಗಳ ಪ್ರಯೋಜನಗಳನ್ನು ತಮ್ಮ ರಾಜ್ಯದ ಜನರು ಗಿಟ್ಟಿಸಬಹುದಾದರೆ ಪಶ್ಚಿಮ ಬಂಗಾಳದ ಜನರು ಈ ಪ್ರಯೋಜನಗಳಿಂದ ಏಕೆ ವಂಚಿತರಾಗುತ್ತಿದ್ದಾರೆ? ಇದರರ್ಥ ಪಶ್ಚಿಮ ಬಂಗಾಳದ ಅಭಿವೃದ್ಧಿಯ ಬಗ್ಗೆ ಟಿಎಂಸಿಗೆ ಖಾಳಜಿಯಿಲ್ಲ ಎಂದು ಹೇಳಿದ್ದಾರೆ.

ಕೇಂದ್ರದಲ್ಲಿ ಆಡಳಿತದಲ್ಲಿರುವ ಅದೇ ಪಕ್ಷವು ಬಂಗಾಳದಲ್ಲೂ ಅಧಿಕಾರಕ್ಕೆ ಬಂದರೆ ಜನರಿಗೆ ಹೆಚ್ಚಿನ ಪ್ರಯೋಜನ ಸಿಗಲಿದೆ ಎಂದವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.