
ನವದೆಹಲಿ: ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ವಿರುದ್ಧ ದೇಶದಾದ್ಯಂತ ಹಲವು ಪ್ರತಿಭಟನೆಗಳು ಜರಗುತ್ತಿವೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೂಡ ಎಸ್‌ಐಆರ್‌ಗೆ ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಅದರ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ ಮಾಡಿದ್ದಾರೆ.
‘ನಾವು ಇನ್ನೆಷ್ಟು ದಿನ ಮೌನವಾಗಿ ಇರಬೇಕು ? ಸುಮ್ಮನಿದ್ದ ಮಾತ್ರಕ್ಕೆ ಶಾಂತಿಯಿಂದ ಜೀವಿಸುತ್ತಿದ್ದೇವೆ ಎಂದು ಅರ್ಥವಲ್ಲ’, ‘ನಮಗೆ ಉತ್ತರ ಬೇಕು. ಆ ಉತ್ತರವು ಜನರ ನ್ಯಾಯಾಲಯದಲ್ಲಿ ದೊರಕಲಿದೆ’ ಇದು ಮಮತಾ ಬ್ಯಾನರ್ಜಿ ಅವರು ರಚಿಸಿದ ಕವಿತೆಗಳ ಸಾಲುಗಳು. ಇಂತಹ ಎಸ್ಐಆರ್ ವಿರೋಧದ ಧ್ವನಿಯಿರುವ 26 ಕವಿತೆಗಳಿರುವ ‘ಎಸ್ಐಆರ್: 26 ಇನ್ 26’ ಹೆಸರಿನ ಕವನ ಸಂಕಲನವನ್ನು 49ನೇ ಅಂತರರಾಷ್ಟ್ರೀಯ ಕೋಲ್ಕತ್ತ ಪುಸ್ತಕ ಮೇಳದಲ್ಲಿ ಬಿಡುಗಡೆಗೊಳಿಸಿದ್ದಾರೆ.
ಪ್ಯಾನಿಕ್, ದೂಮ್, ಫೈಟ್, ಡೆಮಾಕ್ರಸಿ, ಮಾಕೆರಿ, ಹೂ ಇಸ್ ಟು ಬ್ಲೇಮ್ ಹೆಸರಿನ ಕವಿತೆಗಳು ಈ ಕವನ ಸಂಕಲನದಲ್ಲಿವೆ. ಪುಸ್ತಕದ ಮುನ್ನುಡಿಯಲ್ಲಿ ‘ಈ ಹಾಳುಮಾಡುವ ಆಟದಲ್ಲಿ ಪ್ರಾಣಕಳೆದುಕೊಂಡವರಿಗೆ ಈ ಪುಸ್ತಕ ಅರ್ಪಣೆ. ಎಸ್‌ಐಆರ್ ಮೂಲಕ ಕೇಂದ್ರ ಸರ್ಕಾರವು ಬಂಗಾಳದ ಜನರಲ್ಲಿ ಭಯವನ್ನು ಪ್ರಚಾರ ಮಾಡುತ್ತಿದೆ. ಈ ಕವನಗಳು ಪ್ರತಿರೋಧದ ಮನೋಭಾವ ಹೊಂದಿವೆ’ ಎಂದು ಬರೆದಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಎಸ್‌ಐಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಬುಧವಾರ(ಫೆ.4) ವಿಚಾರಣೆ ಜರುಗಲಿದೆ. ಅದಕ್ಕೂ ಮುನ್ನ ಅವರು ಪತ್ರಕರ್ತರೊಂದಿಗೆ ಮಾತನಾಡಿದ್ದಾರೆ.
‘ನಾನು ಪ್ರಯಾಣಿಸುವ ಸಂದರ್ಭದಲ್ಲಿ ಈ ಕವಿತೆಗಳನ್ನು ಬರೆದಿದ್ದು, ಕೇವಲ ಮೂರೇ ದಿನದಲ್ಲಿ ಈ ಸಂಕಲನದಲ್ಲಿರುವ ಎಲ್ಲಾ ಕವಿತೆಗಳನ್ನು ಬರೆದಿದ್ದೇನೆ. ನಾನು ರಾಜಕೀಯ ಅಧಿಕಾರದಿಂದ ಬರುತ್ತಿರುವ ಸಂಬಳದಿಂದ ಜೀವಿಸುತ್ತಿಲ್ಲ. ನನ್ನ ಪುಸ್ತಕಗಳ ಗೌರವಧನದಿಂದಲೇ ನನ್ನ ಅಗತ್ಯಗಳನ್ನು ಪೂರೈಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇದುವರೆಗೆ ಕತೆ, ಕವಿತೆ, ಪ್ರಬಂಧ, ಅಂಕಣ ಬರಹ ಸೇರಿದಂತೆ ಹಲವು ಪ್ರಕಾರಗಳಿಂದ ಒಟ್ಟು 163 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಬ್ಯಾನರ್ಜಿ, ಚಿತ್ರಕಲಾವಿದೆ ಕೂಡ ಆಗಿದ್ದು, ದೇಶ –ವಿದೇಶಗಳ ಹಲವಾರು ಪ್ರದರ್ಶನಗಳಲ್ಲಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.