ಗುವಾಹಟಿ: ಸರ್ಕಾರಿ ಬಸ್‌ನ ನಾಮಫಲಕದಲ್ಲಿ ಮಣಿಪುರ ಹೆಸರು ತೆಗೆಸಿದ್ದನ್ನು ಪ್ರತಿಭಟಿಸಿ ಮಣಿಪುರ ಅಖಂಡತೆಗಾಗಿನ ಮೈತೇಯಿ ಕೋಆರ್ಡಿನೇಟಿಂಗ್ ಕಮಿಟಿ (ಕೊಕೊಮಿ) ಐದು ಜಿಲ್ಲೆಗಳಲ್ಲಿ ಗುರುವಾರ ಕರೆ ನೀಡಿದ್ದ 48 ಗಂಟೆಗಳ ಬಂದ್‌ನಿಂದಾಗಿ ಇಂಫಾಲ್ ಕಣಿವೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ವಾಂಗ್‌ಖೇಯಿ, ಖುರೈ, ಕೊಂಗ್ಬಾ, ಕ್ವಾಕೈತೆಲ್ ಮತ್ತು ನಾವೋರ್ಮತಾಂಗ್ ಜಿಲ್ಲೆಗಳಲ್ಲಿ ಸಂಘಟನೆಯ ಸದಸ್ಯರು ಬುಧವಾರ ರಾತ್ರಿಯೇ ರಸ್ತೆಗಿಳಿದು ಅಂಗಡಿಗಳನ್ನು ಮುಚ್ಚಿಸಿದರು. ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಬಾಗಿಲು ಮುಚ್ಚಿದ್ದವು. ಸರ್ಕಾರಿ ಬಸ್‌ಗಳ ಸಂಚಾರವೂ ಇರಲಿಲ್ಲ.
ಪ್ರತಿಭಟನಕಾರರು ರಸ್ತೆಗಳಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇಂಫಾಲ್‌ನಲ್ಲಿ ಭದ್ರತೆ ಹೆಚ್ಚಿಸಿದ್ದು, ರಾಜಭವನಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಸೇರಿ ಪ್ರಮುಖ ಸ್ಥಳಗಳಲ್ಲಿ ಕೇಂದ್ರೀಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.
ಹೆಸರು ತೆಗೆಸಿದ್ದು ಮಣಿಪುರ ವಿರೋಧಿ ಕ್ರಮ, ನಮ್ಮ ಐತಿಹಾಸಿಕ ಮತ್ತು ಸಾಂಸ್ಕೃತಿಕ ಹೆಗ್ಗುರುತಿಗೆ ಒಡ್ಡಿದ ಸವಾಲು ಎಂದು ಕೊಕೊಮಿ ಸಂಘಟನೆಯ ಸಂಚಾಲಕ ಖುರೈಜಾಮ್ ಥೌಬಾ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯಪಾಲ ಅಜಯ್‌ಕುಮಾರ್ ಭಲ್ಲಾ ಅವರು ಕ್ಷಮಾಪಣೆ ಕೇಳಬೇಕು. ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಡಿಜಿಪಿ ರಾಜೀವ್ ಸಿಂಗ್ ಮತ್ತು ಮುಖ್ಯ ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಸಿಂಗ್ ರಾಜೀನಾಮೆ ನೀಡಬೇಕು ಎಂದು ಕೊಕೋಮಿ ಆಗ್ರಹಿಸಿದೆ.
ಘಟನೆ ಬಗ್ಗೆ ತನಿಖೆ ನಡೆಸಲು ಸರ್ಕಾರ ಗೃಹ ಇಲಾಖೆ ಆಯುಕ್ತ, ಕಾರ್ಯದರ್ಶಿ ಅವರನ್ನೊಳಗೊಂಡ ಸಮಿತಿ ರಚಿಸಿ 15 ದಿನದಲ್ಲಿ ವರದಿ ಕೊಡಲು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.