ಮಲ್ಲಿಕಾರ್ಜುನ ಖರ್ಗೆ ಹಾಗೂ ನರೇಂದ್ರ ಮೋದಿ
–ಪಿಟಿಐ ಚಿತ್ರಗಳು
ನವದೆಹಲಿ: ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ಟೀಕಿಸಿರುವ ಕಾಂಗ್ರೆಸ್, ‘ಇದೊಂದು ಪಿಟ್ ಸ್ಟಾಪ್ ಭೇಟಿ, ತೋರಿಕೆಗಾಗಿ ರಾಜ್ಯಕ್ಕೆ ನೀಡಿದ ಭೇಟಿ, ಸಂಘರ್ಷದಿಂದ ಬೆಂದಿರುವ ಮಣಿಪುರದ ಜನತೆಗೆ ಮಾಡಿದ ಘೋರ ಅವಮಾನ’ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ತಮ್ಮ ಭೇಟಿಗೆ ಭವ್ಯ ಸ್ವಾಗತ ಸಮಾರಂಭವನ್ನು ಪ್ರಧಾನಿ ಮೋದಿ ಅವರು ತಾವೇ ಮಾಡಿಸಿಕೊಂಡಿದ್ದಾರೆ. ಇದು ಜನಾಂಗೀಯ ಸಂಘರ್ಷದಿಂದಾಗಿ ಮಾಗದ ಗಾಯವನ್ನು ಚಿವುಟಿದಂತಾಗಿದೆ. ನಿಮ್ಮದೇ ಮಾತುಗಳಲ್ಲಿ ಹೇಳುವುದಾದರೆ, ‘ಎಲ್ಲಿದೆ ರಾಜಧರ್ಮ?’ ಎಂದು ಪ್ರಶ್ನಿಸಿದ್ದಾರೆ.
'ನರೇಂದ್ರ ಮೋದಿ ಅವರೇ, ಕೇವಲ ಮೂರು ಗಂಟೆಗಳ ನಿಮ್ಮ ಮಣಿಪುರ ಭೇಟಿ ಯಾವುದೇ ಕರುಣೆಯಲ್ಲ. ಇದೊಂದು ಪ್ರಹಸನ, ತೋರಿಕೆ ಮತ್ತು ನೊಂದ ಜನರಿಗೆ ಮಾಡಿದ ಅವಮಾನ. ಇಂಫಾಲದಲ್ಲಿ ರೋಡ್ ಶೋ ಹಾಗೂ ಚುರಚಂದಾಪುರಕ್ಕೆ ಸಾಂಕೇತಿಕ ಭೇಟಿ ನೀಡಿದಿರಿ. ಆದರೆ ನಿರಾಶ್ರಿತರ ತಾಣದಲ್ಲಿ ಆಶ್ರಯ ಪಡೆದಿರುವವರ ನೋವನ್ನು ಆಲಿಸಲಿಲ್ಲ. ಹೇಡಿಯಂತೆ ಓಡಿ ಹೋದಿರಿ’ ಎಂದು ಆರೋಪಿಸಿದ್ದಾರೆ.
‘864 ದಿನಗಳ ಹಿಂಸಾಚಾರದಲ್ಲಿ 300 ಜನ ಮೃತಪಟ್ಟಿದ್ದಾರೆ. 67 ಸಾವಿರ ಜನ ಸ್ಥಳಾಂತರಗೊಂಡಿದ್ದಾರೆ. 1,500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. 46 ವಿದೇಶ ಪ್ರವಾಸ ನಡೆಸಿದಿರಿ, ಆದರೆ ನಿಮ್ಮದೇ ಜನರ ಪರವಾಗಿ ಒಂದೆರೆಡು ಸಾಂತ್ವನದ ನುಡಿಗಳನ್ನಾಡಲಿಲ್ಲ. ಮಣಿಪುರಕ್ಕೆ ನಿಮ್ಮ ಈ ಹಿಂದಿನ ಕೊನೆಯ ಭೇಟಿ 2022ರ ಜನವರಿ. ಅದೂ ಚುನಾವಣೆಗಾಗಿ. ನಿಮ್ಮ ಡಬಲ್ ಎಂಜಿನ್ ಸರ್ಕಾರವು ಮಣಿಪುರದ ಮುಗ್ದ ಜೀವಗಳನ್ನು ನಾಶ ಮಾಡಿದೆ. ನೀವು ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವ ಮೂಲಕ ತಮ್ಮ ಅಸಮರ್ಥತೆಯನ್ನು ಪ್ರದರ್ಶಿಸಿದ್ದೀರಿ. ರಾಜ್ಯದಲ್ಲಿ ಈಗಲೂ ಹಿಂಸಾಚಾರ ನಡೆಯುತ್ತಿದೆ. ನಿಮ್ಮ ಅಸಮರ್ಥತೆಯಿಂದ ಮಣಿಪುರದ ಜನರನ್ನು ವಂಚಿಸಿದ್ದೀರಿ’ ಎಂದು ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಣಿಪುರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಹೊಣೆಯಾಗಿತ್ತು. ಈಗ ಅದು ಕೇಂದ್ರ ಸರ್ಕಾರದ ಹೊಣೆಯಾಗಿದೆ. ಆದರೆ ಅದನ್ನು ನಿಭಾಯಿಸಲು ಮತ್ತೊಮ್ಮೆ ಮೋದಿ ಸರ್ಕಾರ ವಿಫಲವಾಗಿದೆ. ದೇಶದ ರಕ್ಷಣೆ ಮತ್ತು ಗಡಿಗಳ ಗಸ್ತು ಕೇಂದ್ರದ ಹೊಣೆ. ಆದರೆ ಇಂಥ ‘ಪಿಟ್ ಸ್ಟಾಪ್’ ಮೂಲಕ ಇಲ್ಲಿನ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದೀರಿ’ ಎಂದು ಖರ್ಗೆ ಹೇಳಿದ್ದಾರೆ.
ವಯನಾಡ್‌ನಲ್ಲಿ ಮಾತನಾಡಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ‘ಎರಡು ವರ್ಷಗಳ ಬಳಿಕವಾದರೂ ಮಣಿಪುರಕ್ಕೆ ಹೋಗಲು ಮನಸ್ಸು ಮಾಡಿದ್ದಕ್ಕಾಗಿ ಸಂತಸ ಪಡಬೇಕು. ಬಹಳಾ ಹಿಂದೆಯೇ ಅವರು ಭೇಟಿ ನೀಡಬೇಕಿತ್ತು. ಆದರೆ ರಾಜ್ಯದಲ್ಲಿ ಏನು ನಡೆಯಿತೋ ಅದನ್ನು ಹಾಗೇ ಮುಂದುವರಿಯಲು ಬಿಟ್ಟಿದ್ದು ಅತ್ಯಂತ ದುರುದೃಷ್ಟಕರ. ಇದರಿಂದಾಗಿ ಹಲವರ ಹತ್ಯೆಯಾಯಿತು. ಇದು ಭಾರತದ ಪ್ರಧಾನಿಯಾದವರು ನಡೆದುಕೊಂಡು ಬಂದಿರುವ ಪರಂಪರೆಯಲ್ಲ’ ಎಂದು ಹರಿಹಾಯ್ದಿದ್ದಾರೆ.
ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಪ್ರತಿಕ್ರಿಯಿಸಿ, ‘ಸಂಭ್ರಮಿಸುವಂತೆ ಅದ್ಧೂರಿ ಸ್ವಾಗತವನ್ನು ಮಾಡಕೊಂಡ ಪ್ರಧಾನಿ ಮೋದಿ ಅವರು ಇದೊಂದನ್ನಾದರೂ ಪ್ರಚಾರ ಪಡೆಯುವ ಪ್ರವಾಸವಲ್ಲ ಎಂದು ಪರಿಗಣಿಸಬೇಕಿತ್ತು’ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಧ್ಯಾಹ್ನ ಮಣಿಪುರಕ್ಕೆ ಭೇಟಿ ನೀಡಿದರು. 2023ರ ಮೇನಿಂದ ಆರಂಭವಾದ ಜನಾಂಗೀಯ ಸಂಘರ್ಷದ ನಂತರ ರಾಜ್ಯಕ್ಕೆ ನೀಡಿದ ಮೊದಲ ಭೇಟಿಯಾಗಿತ್ತು. ₹8,500 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು. ಮೂರು ದಿನಗಳ ಭೆಟಿಯಲ್ಲಿ ಮೀಜೊರಾಂ, ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರಕ್ಕೆ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.