ADVERTISEMENT

ಮಣಿಪುರ: INSAS, SLR ರೈಫಲ್‌ ಸೇರಿ 328 ಅತ್ಯಾಧುನಿಕ ಶಸ್ತ್ರಾಸ್ತ್ರ ವಶಕ್ಕೆ

ಪಿಟಿಐ
Published 14 ಜೂನ್ 2025, 11:30 IST
Last Updated 14 ಜೂನ್ 2025, 11:30 IST
<div class="paragraphs"><p>ಭದ್ರತಾ ಪಡೆಗಳು ವಶಪಡಿಸಿಕೊಂಡಿರುವ&nbsp;ಶಸ್ತ್ರಾಸ್ತ್ರಗಳು</p></div>

ಭದ್ರತಾ ಪಡೆಗಳು ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರಗಳು

   

–ಪಿಟಿಐ ಚಿತ್ರ

ಗುವಾಹಟಿ: ಮಣಿಪುರದ ಐದು ಕಣಿವೆ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಕಳೆದೆರಡು ದಿನಗಳಿಂದ ನಡೆಸಿದ ಕಾರ್ಯಾಚರಣೆಯಲ್ಲಿ 328 ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿವೆ.

ADVERTISEMENT

‘151 ಎಸ್‌ಎಲ್‌ಆರ್ ರೈಫಲ್‌, 65 ಐಎನ್‌ಎಸ್‌ಎಎಸ್ ರೈಫಲ್‌, ಆರು ಎಕೆ–47 ಸರಣಿ ರೈಫಲ್‌, 73 ಇತರ ರೈಫಲ್‌ಗಳು, ಒಂದು ಮಾರ್ಟರ್ ಶೆಲ್‌ ಮತ್ತು ಐದು ಕಾರ್ಬೈನ್‌ ಬಂದೂಕು, ದೊಡ್ಡ ಪ್ರಮಾಣದ ಮದ್ದುಗುಂಡುಗಳು, ಇತರ ಉಪಕರಣಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈತೇಯಿ ಪ್ರಾಬಲ್ಯದ ಕಣಿವೆ ಜಿಲ್ಲೆಗಳಾದ ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ, ತೌಬಾಲ್ ಮತ್ತು ಕಾಕ್‌ಚಿಂಗ್‌ನ ಹೊರವಲಯದಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ತಿಳಿಸಿದ್ದಾರೆ.

ಮಣಿಪುರದಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನಡೆಸುತ್ತಿರುವ ನಿರಂತರ ಪ್ರಯತ್ನಗಳಲ್ಲಿ ಇಂದಿನ ಯಶಸ್ವಿ ಕಾರ್ಯಾಚರಣೆಯು ಮಹತ್ವದ ಮೈಲಿಗಲ್ಲಾಗಿದೆ ಎಂದು ಅವರು ಹೇಳಿದ್ದಾರೆ.

ಮಣಿಪುರದಲ್ಲಿ 2023ರ ಮೇ 3ರಂದು ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ನಡೆದ ಜನಾಂಗೀಯ ಹಿಂಸಾಚಾರದ ವೇಳೆ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿತ್ತು. ಸದ್ಯ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರೂ ಇನ್ನಷ್ಟು ಶಸ್ತ್ರಾಸ್ತ್ರಗಳು ನಾಪತ್ತೆಯಾಗಿರುವುದು ಕಳವಳವನ್ನುಂಟು ಮಾಡಿದೆ.

ಸಂಘರ್ಷ ಪೀಡಿತ ಮಣಿಪುರದಲ್ಲಿ ಫೆಬ್ರುವರಿಯಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆಗಾಗಿ ಭದ್ರತಾ ಪಡೆಗಳು ಪ್ರಯತ್ನಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.