ADVERTISEMENT

ಮನೀಶ್ ಸಿಸೋಡಿಯಾ ಬಂಧನಕ್ಕೆ ಆಕ್ರೋಶ: ಸರ್ವಾಧಿಕಾರದ ಪರಮಾವಧಿ ಎಂದ ಎಎಪಿ

ಪಿಟಿಐ
Published 27 ಫೆಬ್ರುವರಿ 2023, 5:11 IST
Last Updated 27 ಫೆಬ್ರುವರಿ 2023, 5:11 IST
   

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ಅಬಕಾರಿ ನೀತಿ ಜಾರಿ ಹಗರಣದಲ್ಲಿ ಸಿಬಿಐ ಬಂಧಿಸಿರುವುದು ‘ಸರ್ವಾಧಿಕಾರದ ಪರಮಾವಧಿ’ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪಿಸಿದೆ.

‘ಅತ್ಯುತ್ತಮ ವ್ಯಕ್ತಿ ಹಾಗೂ ಉತ್ತಮ ಶಿಕ್ಷಣ ಸಚಿವರನ್ನು ಬಂಧಿಸಿ ರುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರು ಕ್ಷಮಿಸುವುದಿಲ್ಲ. ನಿಮ್ಮ ಸರ್ವಾಧಿಕಾರ ಒಂದು ದಿನ ಕೊನೆಯಾಗಲಿದೆ’ ಎಂದು ಎಎಪಿ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ.

ಎಎಪಿ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜನಪ್ರಿಯತೆಯಿಂದ ಬಿಜೆಪಿ ದಿಗಿಲುಗೊಂಡಿದೆ ಎಂದು ಎಎಪಿ ಶಾಸಕಿ ಆತಿಶಿ ಹೇಳಿದ್ದಾರೆ. ‘ಸಿಸೋಡಿಯಾ ವಿರುದ್ಧದ ಪ್ರಕರಣ ಸುಳ್ಳು. ಸುಳ್ಳು ಪ್ರಕರಣಗಳು, ಶೋಧ ಹಾಗೂ ಬಂಧನದ ಮೂಲಕ ಎಎಪಿ ಮುಖಂಡರನ್ನು ಸುಮ್ಮನಿರಿಸುವ ಹಾಗೂ ಬೆದರಿಸುವ ಯತ್ನ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಕೇಂದ್ರದ ಬಿಜೆಪಿ ಸರ್ಕಾರವು ಆಯ್ದ ಜನರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ ಎಂದು ಸಚಿವ ಗೋಪಾಲ್ ರಾಯ್ ಆರೋಪಿಸಿದ್ದಾರೆ.

‘ಅದಾನಿಗೆ ₹2.5 ಲಕ್ಷ ಕೋಟಿ ಸಾಲ ನೀಡಲಾಗಿದೆ. ಅದರಲ್ಲಿ ₹80 ಸಾವಿರ ಕೋಟಿ ಮನ್ನಾ ಮಾಡಲಾಗಿದೆ. ಅದಾನಿ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಸಿಸೋಡಿಯಾ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ರಾಯ್ ಆರೋಪಿಸಿದ್ದಾರೆ.

ಕೇಜ್ರಿವಾಲ್ ಅವರ ಆಡಳಿತ ಮಾದರಿಯಿಂದ ಹೆದರಿರುವ ಬಿಜೆಪಿ, ದೆಹಲಿಯ ಶಿಕ್ಷಣ ಮಾದರಿಯನ್ನು ದುರ್ಬಲಗೊಳಿಸಲು ಮುಂದಾಗಿದೆ ಎಂದು ಪಕ್ಷದ ವಕ್ತಾರ ಸೌರಭರ್ ಭಾರದ್ವಾಜ್ ಅವರು ಹೇಳಿದ್ದಾರೆ.

ಕಾರ್ಯಕರ್ತರು ವಶಕ್ಕೆ
ಸಿಸೋಡಿಯಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಬಿಐ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ಸಂಸದ ಸಂಜಯ್ ಸಿಂಗ್, ಸಚಿವ ಗೋಪಾಲ್ ರಾಯ್ ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು. ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಿಸೋಡಿಯಾ ಅವರನ್ನು ಬೆಂಬಲಿಸಲು ರಾಜಘಾಟ್‌ಗೆ ತೆರಳುತ್ತಿದ್ದ ಎಎಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಕೇಜ್ರಿವಾಲ್ ಟೀಕೆ
ಸಿಸೋಡಿಯಾ ಅವರು ಪ್ರಾಮಾಣಿಕರಾಗಿದ್ದು, ಅವರನ್ನು ಬಂಧಿಸಿರುವುದು ಕೊಳಕು ರಾಜಕೀಯವನ್ನು ತೋರಿಸುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅವರ ಬಂಧನದಿಂದ ಜನರಲ್ಲಿ ಆಕ್ರೋಶ ಮನೆಮಾಡಿದೆ. ಜನರು ಎಲ್ಲರನ್ನೂ ಅರ್ಥ ಮಾಡಿಕೊಂಡಿದ್ದಾರೆ. ಇದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲಿದ್ದಾರೆ. ಈ ಘಟನೆಯಿಂದ ನಮ್ಮ ಚೈತನ್ಯ ಹೆಚ್ಚಿದೆ. ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

***

ಮನೀಷ್‌ ಅವರೇ, ನೀವು ಸತ್ಯಕ್ಕಾಗಿ ಹೋರಾಟ ನಡೆಸುತ್ತಿದ್ದೀರಿ. ಇಡೀ ದೇಶ ನಿಮ್ಮ ಜತೆಗಿದೆ. ಶಿಕ್ಷಣದಲ್ಲಿ ಕ್ರಾಂತಿ ತಂದ ವ್ಯಕ್ತಿಯ ಜೊತೆ ನಾವಿದ್ದೇವೆ.
–ಭಗವಂತ ಮಾನ್, ಪಂಜಾಬ್ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.