ಮೊಹಾಲಿ ಮೈದಾನದಲ್ಲಿ ಮನಮೋಹನ ಸಿಂಗ್ ಹಾಗೂ ಗಿಲಾನಿ
– ರಾಯಿಟರ್ಸ್ ಚಿತ್ರ
ಬೆಂಗಳೂರು: ದೇಶದ ಆರ್ಥಿಕ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಮನಮೋಹನ ಸಿಂಗ್, ಪ್ರಧಾನಿಯಾಗಿದ್ದಾಗ ತಮ್ಮ ರಾಜತಾಂತ್ರಿಕ ನೀತಿಗಳಿಂದ ಬೇರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅದರಲ್ಲೂ ನೆರೆಯ ಪಾಕಿಸ್ತಾನ ಜೊತೆಗಿನ ಬಾಂಧವ್ಯ ವೃದ್ಧಿಸಲು ಕ್ರಿಕೆಟ್ ಅನ್ನು ರಾಜತಾಂತ್ರಿಕ ಆಯುಧವನ್ನಾಗಿ ಬಳಸಿದ್ದರು. ಅವರ ಈ ನಡೆ ‘ಕ್ರಿಕೆಟ್ ರಾಜತಾಂತ್ರಿಕತೆ’ ಎಂದೇ ಪ್ರಸಿದ್ಧವಾಗಿತ್ತು.
2008ರ ಮುಂಬೈ ಉಗ್ರರ ದಾಳಿ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಹಳಸಿತ್ತು. 2011ರ ಏಕದಿನ ವಿಶ್ವಕಪ್‌ಗೆ ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ಆತಿಥ್ಯ ವಹಿಸಿದ್ದವು. ಪಾಕಿಸ್ತಾನದ ಗ್ರೂಪ್ ಹಂತದ ಹಾಗೂ ಕ್ವಾಟರ್ ಫೈನಲ್ ಪಂದ್ಯಗಳು ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡಿದ್ದವು. ಆದರೆ ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರವೇಶ ಪಡೆದಿದ್ದರಿಂದ, ಭಾರತದಲ್ಲೇ ಪಂದ್ಯ ಆಡಬೇಕಾದ ಅನಿವಾರ್ಯತೆ ಎದುರಾಗಿತ್ತು. 2008ರ ದಾಳಿ ಬಳಿಕ ಮೊದಲ ಬಾರಿಗೆ ಪಾಕಿಸ್ತಾನ ತಂಡವು ಭಾರತಕ್ಕೆ ಆಗಮಿಸಿತ್ತು. ವಿಶ್ವವೇ ಕಾದು ಕುಳಿತಿದ್ದ ಪಂದ್ಯಕ್ಕೆ ಮೊಹಾಲಿಯಲ್ಲಿರುವ ಪಂಜಾಬ್ ಕ್ರಿಕೆಟ್ ಎಸೋಶಿಯೇಷನ್ ಮೈದಾನ ಸಾಕ್ಷಿಯಾಗಿತ್ತು.
ಈ ವೇಳೆ ಅಚ್ಚರಿಯ ನಡೆ ಎಂಬಂತೆ, ಮನಮೋಹನ ಸಿಂಗ್, ಪಾಕಿಸ್ತಾನದ ಅಂದಿನ ಪ್ರಧಾನಿ ಯೂಸುಫ್ ರಝಾ ಗಿಲಾನಿ ಅವರಿಗೆ ಪತ್ರ ಬರೆದು, ಮೊಹಾಲಿ ಪಂದ್ಯ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನ ನೀಡಿದ್ದರು. ಆಹ್ವಾನ ಸ್ವೀಕರಿಸಿದ್ದ ಗಿಲಾನಿ ಭಾರತಕ್ಕೆ ಬಂದಿದ್ದರು. ಅಂದು ಈ ಹಿಂದೆ ಎಂದೂ ಕಾಣದ ದೃಶ್ಯಕ್ಕೆ ಭಾರತ ಸಾಕ್ಷಿಯಾಗಿತ್ತು. ಉಭಯ ರಾಷ್ಟ್ರಗಳ ಪ್ರಧಾನಿಗಳು ಅಕ್ಕಪಕ್ಕ ಕುಳಿತು ಪಂದ್ಯ ವೀಕ್ಷಣೆ ಮಾಡಿದ್ದರು. ಆಟಗಾರ ಕೈ ಕುಲುಕಿ ಶುಭಕೋರಿದ್ದರು.
ಆ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿತ್ತು.
2012–13ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಜರುಗಿನ 3 ಒಡಿಐ ಹಾಗೂ 3 ಟಿ–20 ಪಂದ್ಯಗಳ ಸರಣಿಯೇ, ಉಭಯ ರಾಷ್ಟ್ರಗಳ ನಡುವೆ ನಡೆದ ಕೊನೆಯ ದ್ವಿಪಕ್ಷೀಯ ಸರಣಿ. ಅದಾದ ಬಳಿಕ ಐಸಿಸಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸರಣಿಯಲ್ಲಿ ಉಭಯ ರಾಷ್ಟ್ರಗಳು ತಟಸ್ಥ ತಾಣದಲ್ಲಿ ಎದುರುಬದುರಾಗಿದ್ದವು.
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ 2025 ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ತಟಸ್ಥ ಮೈದಾನದಲ್ಲಿ ಆಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.