
ನವದೆಹಲಿ: '2025' –ಭಾರತ ಅನೇಕ ಮೈಲಿಗಲ್ಲುಗಳಿಗೆ ಸಾಕ್ಷಿಯಾಗಿದೆ. ರಾಷ್ಟ್ರೀಯ ಭದ್ರತೆ, ಕ್ರೀಡೆ, ವೈಜ್ಞಾನಿಕ ಕ್ಷೇತ್ರಗಳಲ್ಲಿ ಭಾರತದ ಪ್ರಭಾವ ಎಲ್ಲೆಡೆ ಗೋಚರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನ 129ನೇ ಸಂಚಿಕೆ ಇಂದು(ಭಾನುವಾರ) ದೇಶದಾದ್ಯಂತ ಪ್ರಸಾರವಾಯಿತು. ಇದು ಈ(2025) ವರ್ಷದ ಕೊನೆಯ ಸಂಚಿಕೆ ಆಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 2025ನೇ ಸಾಲಿನಲ್ಲಿ ಭಾರತ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಸ್ಮರಿಸಿದ್ದಾರೆ.
'ಆಪರೇಷನ್ ಸಿಂಧೂರ' ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಗಿದೆ. ದೇಶವು ತನ್ನ ಭದ್ರತೆಯ ವಿಷಯದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುವುದನ್ನು ಜಗತ್ತಿಗೆ ತೋರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಏಪ್ರಿಲ್ 22ರಂದು 26 ಜನರನ್ನು ಬಲಿ ತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಮೇ 7 ರಂದು ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು.
ಇದೇ ವೇಳೆ 'ವಂದೇ ಮಾತರಂ' ಗೀತೆಗೆ 150 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ದೇಶದಾದ್ಯಂತ ಕಂಡು ಬಂದ ದೇಶಭಕ್ತಿಯ ಉತ್ಸಾಹವನ್ನೂ ಮೋದಿ ಶ್ಲಾಘಿಸಿದ್ದಾರೆ.
#VandeMataram150 ಎಂಬ ಹ್ಯಾಶ್‌ಟ್ಯಾಗ್ ಬಳಸಿ ನಿಮ್ಮ ಸಂದೇಶ ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ನಾನು ನಿಮ್ಮಲ್ಲಿ ಮನವಿ ಮಾಡಿದ್ದೆ. ದೇಶದ ನಾಗರಿಕರು ಈ ಅಭಿಯಾನದಲ್ಲಿ ಅಪಾರ ಉತ್ಸಾಹದಿಂದ ಭಾಗವಹಿಸಿದರು ಎಂದು ಅವರು ಹೇಳಿದ್ದಾರೆ.
2025– ಭಾರತದ ಕ್ರೀಡಾಲೋಕ ಅನೇಕ ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ವರ್ಷ ಭಾರತೀಯ ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. ಮಹಿಳಾ ಕ್ರಿಕೆಟ್ ತಂಡವು, ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿತು.
ಇದಲ್ಲದೇ ಮಹಿಳಾ ಅಂಧರ ಕ್ರಿಕೆಟ್ ತಂಡವೂ ಟಿ20 ವಿಶ್ವಕಪ್ ಗೆದ್ದು ದೇಶಕ್ಕೆ ಹೆಮ್ಮೆ ತಂದಿತು. ಏಷ್ಯಾ ಕಪ್ ಟಿ20ಯಲ್ಲೂ ತ್ರಿವರ್ಣ ಧ್ವಜ ಹಾರಿತು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪ್ಯಾರಾ-ಅಥ್ಲೀಟ್‌ಗಳು ಪದಕಗಳನ್ನು ತಂದರು ಎಂದು ಮೋದಿ ಹೇಳಿದ್ದಾರೆ.
ಭಾರತವು ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಶುಭಾಂಶು ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ.
ಜಗತ್ತು ಭಾರತದತ್ತ ಹೆಚ್ಚಿನ ಭರವಸೆಯಿಂದ ನೋಡುತ್ತಿದೆ. ಇದಕ್ಕೆ ಮುಖ್ಯ ಕಾರಣ ದೇಶದ ಯುವ ಶಕ್ತಿ ಎಂದು ಅವರು ಹೇಳಿದ್ದಾರೆ.
ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಉಪಕ್ರಮಗಳು 2025ರಲ್ಲಿ ಆರಂಭವಾಗಿವೆ. ಪರಿಸರ ಸಂರಕ್ಷಣೆಯ ಭಾಗವಾಗಿ ಭಾರತದಲ್ಲಿ ಚೀತಾಗಳ ಸಂಖ್ಯೆ ಈಗ 30ರ ಗಡಿ ದಾಟಿದೆ ಎಂದು ಅವರು ತಿಳಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳ ಇಡೀ ಜಗತ್ತನ್ನು ಬೆರಗುಗೊಳಿಸಿತು. ನಂಬಿಕೆ, ಸಂಸ್ಕೃತಿ ಮತ್ತು ಪರಂಪರೆ ಒಂದಾಗಿ ಕಾಣಿಸಿಕೊಂಡವು. ಅಲ್ಲದೇ ವರ್ಷದ ಕೊನೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ 'ಧ್ವಜಾರೋಹಣ' ಸಮಾರಂಭವು ಪ್ರತಿಯೊಬ್ಬ ಭಾರತೀಯನ ಹೃದಯಲ್ಲಿ ಹೆಮ್ಮೆಯ ಭಾವನೆಯನ್ನು ತುಂಬಿತು ಎಂದು ಅವರು ಹೇಳಿದ್ದಾರೆ.
2025–ಭಾರತಕ್ಕೆ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಿದ ವರ್ಷ. ಹಲವಾರು ಸ್ಥಳಗಳಲ್ಲಿ ನೈಸರ್ಗಿಕ ವಿಕೋಪಗಳನ್ನು ಎದುರಿಸಬೇಕಾಯಿತು. ಆದಾಗ್ಯೂ 2026ರ ಹೊತ್ತಿಗೆ ದೇಶವು ಹೊಸ ಭರವಸೆಗಳು ಮತ್ತು ನಿರ್ಣಯಗಳೊಂದಿಗೆ ಮುಂದುವರಿಯಲು ಸಿದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.