ADVERTISEMENT

ಸೈಫ್ ಮೇಲಿನ ದಾಳಿಕೋರ ಸೆರೆಯಾದಲ್ಲಿ ಬಾಂಗ್ಲಾದೇಶ ನಾಗರಿಕರ ಅಕ್ರಮ ವಾಸ: BJP ನಾಯಕ

ಪಿಟಿಐ
Published 19 ಜನವರಿ 2025, 13:08 IST
Last Updated 19 ಜನವರಿ 2025, 13:08 IST
<div class="paragraphs"><p>ಬಿಜೆಪಿ ನಾಯಕ&nbsp;ಕಿರೀಟ್‌ ಸೋಮೈಯ, ಒಳಚಿತ್ರದಲ್ಲಿ ನಟ ಸೈಫ್‌ ಅಲಿ ಖಾನ್‌ ಮತ್ತು ಶರೀಫುಲ್‌ ಇಸ್ಲಾಮ್‌ ಶೆಹಜಾದ್‌ ಮೊಹಮ್ಮದ್‌ ರೊಹಿಲ್ಲಾ ಅಮಿನ್‌ ಫಕೀರ್‌&nbsp;</p></div>

ಬಿಜೆಪಿ ನಾಯಕ ಕಿರೀಟ್‌ ಸೋಮೈಯ, ಒಳಚಿತ್ರದಲ್ಲಿ ನಟ ಸೈಫ್‌ ಅಲಿ ಖಾನ್‌ ಮತ್ತು ಶರೀಫುಲ್‌ ಇಸ್ಲಾಮ್‌ ಶೆಹಜಾದ್‌ ಮೊಹಮ್ಮದ್‌ ರೊಹಿಲ್ಲಾ ಅಮಿನ್‌ ಫಕೀರ್‌ 

   

ಪಿಟಿಐ ಚಿತ್ರಗಳು

ಮುಂಬೈ: ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಅವರ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿ ಸೆರೆಯಾಗಿರುವ ಸ್ಥಳದಲ್ಲಿ ಬಾಂಗ್ಲಾದೇಶದ ಸಾಕಷ್ಟು ನಾಗರಿಕರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕಿರೀಟ್‌ ಸೋಮೈಯ ಭಾನುವಾರ ಹೇಳಿದ್ದಾರೆ.

ADVERTISEMENT

ಮಾಜಿ ಸಂಸದರೂ ಆಗಿರುವ ಕಿರೀಟ್‌, ಕವೆಸರ್‌ ಕಾರ್ಮಿಕ ಶಿಬಿರದಲ್ಲಿ ಕಾರ್ಯಾಚರಣೆ ನಡೆಸಬೇಕು ಎಂದು ಠಾಣೆ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿದ್ದಾರೆ.

'ಸೈಫ್‌ ಅಲಿ ಖಾನ್‌ ಅವರಿಗೆ ಚಾಕುವಿನಿಂದ ಇರಿದ ಆರೋಪಿ ಮೊಹಮ್ಮದ್ ಶೆಹಜಾದ್‌, ಠಾಣೆಯ ಕಾಸರ್‌ ವದಾವಲಿಯ ಹಿರಾನಂದನಿ ಎಸ್ಟೇಟ್‌ ಸಮೀಪದಲ್ಲಿರುವ ಕಾರ್ಮಿಕ ಶಿಬಿರದಲ್ಲಿ ಉಳಿದುಕೊಂಡಿದ್ದ. ಅಲ್ಲಿಗೆ ಇಂದು ಮಧ್ಯಾಹ್ನ 12.15ಕ್ಕೆ ಹೋಗಿದ್ದೆ' ಎಂದು ಕಿರೀಟ್‌ ಅವರು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, 'ಮೊಹಮ್ಮದ್ ಶೆಹಜಾದ್‌ ಮೂರು ತಿಂಗಳಿಂದ ವಾಸವಾಗಿದ್ದ ಕವೆಸರ್‌ ಕಾರ್ಮಿಕ ಶಿಬಿರದಲ್ಲಿ 12 ಕೆಲಸಗಾರರನ್ನು ಭೇಟಿಯಾದೆ. ಅದರಲ್ಲಿ 9 ಮಂದಿ ಬಾಂಗ್ಲಾದೇಶಿ ಮುಸ್ಲಿಮರು. ತಾವೆಲ್ಲ ಪಶ್ಚಿಮ ಬಂಗಾಳದ ಮಾಲ್ದಾದವರು ಎಂದು ಹೇಳಿಕೊಂಡರು. ಆದರೆ, ಸೂಕ್ತ ದಾಖಲೆಗಳು ಅವರ ಬಳಿ ಇಲ್ಲ. ಕಾರ್ಯಾಚರಣೆ ನಡೆಸುವಂತೆ ಪೊಲೀಸ್‌ ಆಯುಕ್ತರೊಂದಿಗೆ ಮಾತನಾಡಿದ್ದೇನೆ' ಎಂದು ತಿಳಿಸಿದ್ದಾರೆ.

ದುಷ್ಕರ್ಮಿಯು ಬಾಂದ್ರಾದಲ್ಲಿರುವ ಸೈಫ್‌ ಅವರ ಮನೆಗೆ ಜನವರಿ 16ರಂದು ಮುಂಜಾನೆ ನುಗ್ಗಿದ್ದ. ಮನೆಗೆಲಸದಾಕೆ ಎಲಿಯಾಮಾ ಫಿಲಿಪ್ಸ್‌ ಅವರು ಆತನನ್ನು ಕಂಡ ಕೂಡಲೇ ಚೀರುತ್ತಾ, ಸೈಫ್‌ ಅವರನ್ನು ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಸೈಫ್‌ ಮತ್ತು ದುಷ್ಕರ್ಮಿ ನಡುವೆ ಹೊಡೆದಾಟವಾಗಿತ್ತು. ಆಗ ಆತ ಚಾಕುವಿನಿಂದ ಆರು ಬಾರಿ ಸೈಫ್‌ಗೆ ಇರಿದಿದ್ದ. ರಕ್ಷಣೆಗೆ ಧಾವಿಸಿದ ಎಲಿಯಾಮಾ ಮತ್ತು ಗೀತಾ ಎಂಬ ಇನ್ನೊಬ್ಬ ಸಿಬ್ಬಂದಿಗೂ ಗಾಯವಾಗಿತ್ತು.

ಗಂಭೀರವಾಗಿ ಗಾಯಗೊಂಡಿರುವ ನಟ, ಲೀಲಾವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ದಾಳಿಕೋರನನ್ನು ಬಂಧಿಸಿರುವ ಪೊಲೀಸರು, ಆತನನ್ನು ಶರೀಫುಲ್‌ ಇಸ್ಲಾಮ್‌ ಶೆಹಜಾದ್‌ ಮೊಹಮ್ಮದ್‌ ರೊಹಿಲ್ಲಾ ಅಮಿನ್‌ ಫಕೀರ್‌ ಎಂದು ಗುರುತಿಸಿದ್ದಾರೆ. ಬಾಂಗ್ಲಾದೇಶ ಪ್ರಜೆಯಾಗಿರುವ ಆತ, ಪ್ರಕರಣ ಸಂಬಂಧ ತಪ್ಪೊಪ್ಪಿಕೊಂಡಿದ್ದಾನೆ. ಕಳ್ಳತನದ ಉದ್ದೇಶದಿಂದ ಅಂದು ನಟನ ಮನಗೆ ನುಗ್ಗಿದ್ದಾಗಿ ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.