ADVERTISEMENT

ಜೈಪುರದಲ್ಲಿ ಭೀಕರ ಅಪಘಾತ: 11 ಮಂದಿ ಸಾವು

ಪಿಟಿಐ
Published 20 ಡಿಸೆಂಬರ್ 2024, 4:08 IST
Last Updated 20 ಡಿಸೆಂಬರ್ 2024, 4:08 IST
<div class="paragraphs"><p>ಅಪಘಾತದ ದೃಶ್ಯ&nbsp;</p></div>

ಅಪಘಾತದ ದೃಶ್ಯ 

   

–ಎಎನ್‌ಐ ಎಕ್ಸ್‌ (ಟ್ವಿಟರ್) ಚಿತ್ರ

ಜೈಪುರ: ರಾಜಸ್ಠಾನದಲ್ಲಿ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್‌ವೊಂದು ಶುಕ್ರವಾರ ಹಲವು ವಾಹನಗಳಿಗೆ ಗುದ್ದಿದ ಪರಿಣಾಮ ಅಗ್ನಿಅವಘಡ ಸಂಭವಿಸಿ 11 ಜನ ಮೃತಪಟ್ಟಿದ್ದಾರೆ ಮತ್ತು 35 ಮಂದಿ ಗಾಯಗೊಂಡಿದ್ದಾರೆ. 

ADVERTISEMENT

ಜೈಪುರ –ಅಜ್ಮೇರ್‌ ಹೆದ್ದಾರಿಯಲ್ಲಿ ಶಾಲೆಯೊಂದರ ಮುಂದೆ ಮುಂಜಾನೆ 5.45ಕ್ಕೆ ಅವಘಡ ಸಂಭವಿಸಿದೆ. 30ಕ್ಕೂ ಅಧಿಕ ವಾಹನಗಳು ಬೆಂಕಿಗಾಹುತಿಯಾಗಿವೆ.

ಗಾಯಗೊಂಡವರಲ್ಲಿ ಅರ್ಧದಷ್ಟು ಜನರ ಆರೋಗ್ಯ ಸ್ಥಿತಿ ಗಂಭಿರವಾಗಿದೆ’ ಎಂದು ರಾಜಸ್ಥಾನದ ಆರೋಗ್ಯ ಸಚಿವ ಗಜೇಂದ್ರ ಸಿಂಗ್‌ ಖಿಮ್ಸ‌ರ್‌ ಅವರು ತಿಳಿಸಿದ್ದಾರೆ. 

‘ಅಪಘಾತದಲ್ಲಿ ಟ್ಯಾಂಕರ್‌ನ ಪೈಪ್‌ಗೆ ಹಾನಿಯಾದ ಕಾರಣ ಅಡುಗೆ ಅನಿಲ ಸೋರಿಕೆಯಾಗಿ ಅಗ್ನಿ ಅವಘಡ ಸಂಭವಿಸಿದೆ. ಟ್ಯಾಂಕರ್‌ ಹಿಂದೆ ನಿಂತಿದ್ದ, ಎದುರಿನಿಂದ ಬರುತ್ತಿದ್ದ ಮತ್ತು ಅಪಘಾತಗೊಂಡ ವಾಹನಗಳು ಬೆಂಕಿಗಾಹುತಿಯಾಗಿವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಕ್ಷಣಕ್ಕೆ ವಾಹನದಿಂದ ಹೊರಬರಲಾಗದೆ ಹಲವರು ಸುಟ್ಟುಕರಕಲಾಗಿದ್ದಾರೆ. ಎಲ್ಲ ವಾಹನಗಳನ್ನು ಪರಿಶೀಲಿಸಿದ ಬಳಿಕ ಪೂರ್ಣ ಮಾಹಿತಿ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

‘ಹೆದ್ದಾರಿ ಬಳಿ ಇರುವ ಪೈಪ್‌ ಕಾರ್ಖಾನೆಗೂ ಹಾನಿಯಾಗಿದೆ.  ಒಂದು ಕಿ.ಮೀ ವ್ಯಾಪ್ತಿಯಲ್ಲಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ಪಡೆಯು ಘಟನಾ ಸ್ಥಳಕ್ಕೆ ತಕ್ಷಣಕ್ಕೆ ತಲುಪುವುದು ಕಷ್ಟಕರವಾಯಿತು. ಘಣನೆ ನಡೆದ ಪ್ರದೇಶದಲ್ಲಿ 3 ಪೆಟ್ರೊಲ್‌ ಬಂಕ್‌ಗಳಿದ್ದು, ಅದೃಷ್ಟವಶಾತ್‌ ಅವುಗಳಿಗೆ ಹಾನಿಯಾಗಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರ ಕುಟುಂಬದವರಿಗೆ ತಲಾ ಎರಡು ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ಪರಿಹಾರ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್‌’ ಮೂಲಕ ತಿಳಿಸಿದ್ದಾರೆ. 

ರಾಜಸ್ಥಾನ ಸರ್ಕಾರವು ಮೃತ ಕುಟುಂಬಕ್ಕೆ 5 ಲಕ್ಷ ಮತ್ತು ಗಾಯಗೊಂಡವರಿಗೆ 1 ಲಕ್ಷ ಪರಿಹಾರ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.