ಬಾಂಬೆ ಹೈಕೋರ್ಟ್
ಮುಂಬೈ: ಮರಾಠ ಸಮುದಾಯಕ್ಕೆ ಸೇರಿದವರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡುವ ಮಹಾರಾಷ್ಟ್ರ ಸರ್ಕಾರದ ನಿರ್ಣಯದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರು ಸಂಬಂಧಿಸಿದ ವ್ಯಕ್ತಿಗಳಲ್ಲ ಎಂದು ಅಭಿಪ್ರಾಯಪಟ್ಟ ಬಾಂಬೆ ಹೈಕೋರ್ಟ್, ಅರ್ಜಿಯ ವಿಚಾರಣೆಗೆ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾ. ಗೌತಮ್ ಅನ್ಖಡ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ‘ಈ ಪ್ರಕರಣದಲ್ಲಿ ಈಗಾಗಲೇ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಸೆ. 22ರಂದು ಅದು ವಿಚಾರಣೆಗೆ ಬರಲಿದೆ’ ಎಂದಿತು.
‘ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಲಾಗಿದೆ. ಈ ಅವಕಾಶ ಏನಿದ್ದರೂ ಬಾಧಿತ ವ್ಯಕ್ತಿಗಳಿಗೆ ಮಾತ್ರ. ಅನ್ಯ ವ್ಯಕ್ತಿಗಳಿಗಲ್ಲ. ಬಾಧಿತ ವ್ಯಕ್ತಿಗಳು ಮಾತ್ರ ಕಾನೂನಿನ ರಕ್ಷಣೆ ಕೋರಬಹುದು. ಆದರೆ ಈ ಅರ್ಜಿದಾರರು ಬಾಧಿತರಲ್ಲ. ಒಂದೊಮ್ಮೆ ಈ ಅರ್ಜಿದಾರರು ಬಯಸಿದಲ್ಲಿ, ಬಾಧಿತ ವ್ಯಕ್ತಿಗಳ ಅರ್ಜಿಗಳ ಜತೆ ತಮ್ಮ ಅಹವಾಲನ್ನು ಸಲ್ಲಿಸಬಹುದು. ಒಂದೊಮ್ಮೆ ಪೀಠವು ಈ ಅರ್ಜಿದಾರರ ನೆರವು ಬಯಸಿದಲ್ಲಿ, ಆಗ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು’ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಮರಾಠ ಸಮುದಾಯ ಜನರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಒಟ್ಟು ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿವೆ. ಸರ್ಕಾರದ ಈ ನಿರ್ಧಾರವು ಅನಿಯಂತ್ರಿತ, ಅಸಂವಿಧಾನಿಕ ಮತ್ತು ಕಾನೂನುಬಾಹಿರವಾಗಿದ್ದು ಅದನ್ನು ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಹಿಂದುಳಿದ ವರ್ಗಗಳ ಪರವಾಗಿ ಒಬ್ಬ ವ್ಯಕ್ತಿ ನಾಲ್ಕು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಇವುಗಳನ್ನು ನ್ಯಾ. ರೇವತಿ ಮೋಹಿತೆ ಡೇರೆ ಅವರಿರುವ ಪೀಠವು ಸೋಮವಾರ ವಿಚಾರಣೆ ನಡೆಸಲಿದೆ.
ಅರ್ಹ ಮರಾಠರಿಗೆ ಕುಣಬಿ ಜಾತಿ ಪ್ರಮಾಣಪತ್ರ ನೀಡಬೇಕೆಂದು ಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಮನೋಜ್ ಜರಾಂಗೆ ಅವರು ಆ. 29ರಿಂದ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಪ್ರತಿಭಟನೆಯಲ್ಲಿ ಹಲವೆಡೆಯಿಂದ ಜನರು ಸೇರಿ ಬೆಂಬಲ ವ್ಯಕ್ತಪಡಿಸಿದ್ದರು. ಇದರಿಂದ ಮುಂಬೈನ ದಕ್ಷಿಣ ಭಾಗದಲ್ಲಿ ವ್ಯಾಪಕ ಜನದಟ್ಟಣೆ ಉಂಟಾಗಿತ್ತು. ಇದರಿಂದ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ನಗರವನ್ನು ತಕ್ಷಣ ಸಹಜ ಸ್ಥಿತಿಗೆ ತರಲು ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿತ್ತು.
ಹಿಂದೆ ತಾವೂ ಕುಣಬಿಗಳು ಎಂದು ಹಲವು ದಾಖಲೆಗಳನ್ನು ಒದಗಿಸಿದ್ದ ಮರಾಠ ಸಮುದಾಯಕ್ಕೆ ಹೈದರಾಬಾದ್ ಗೆಜೆಟಿಯರ್ ಆಧಾರದಲ್ಲಿ ಸೆ. 2ರಂದು ಸರ್ಕಾರ ತನ್ನ ನಿರ್ಣಯವನ್ನು ಪ್ರಕಟಿಸಿತು. ಇದು ಇತರೆ ಹಿಂದುಳಿದ ಸಮುದಾಯದ ಜನರ ಅಸಮಾಧಾನಕ್ಕೆ ಕಾರಣವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.