ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಗಿರಿಧಾಮದ ಬೈಸರನ್‌ನಲ್ಲಿ ಭಯೋತ್ಪಾದಕರು ಮಂಗಳವಾರ ಪ್ರವಾಸಿಗರ ಮೇಲೆ ಗುಂಡಿನ ಮಳೆ ಸುರಿಸುತ್ತಿದ್ದಾಗ, ಅಲ್ಲಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಜೀವ ಲೆಕ್ಕಿಸದೆ ಹಲವರ ಪ್ರಾಣ ಉಳಿಸಿ ಅಮರರಾಗಿದ್ದಾರೆ.
ಭಯೋತ್ಪಾದಕರ ಗುಂಡಿಗೆ ತನ್ನ ಜೀವ ಕಳೆದುಕೊಂಡ ಈ ವ್ಯಕ್ತಿ, ಹಲವು ಮುಸ್ಲಿಮೇತರ ಪ್ರವಾಸಿಗರ ಜೀವ ಉಳಿಸಲು ನೆರವಾಗಿದ್ದಾರೆ.
– ಹೀಗೆ ಶೌರ್ಯ ಪ್ರದರ್ಶಿಸಿ ಸಹೋದರತ್ವದ ಸಾರವನ್ನು ಸಾರಿದವರು, ಕುದುರೆ ಸವಾರಿ ಕೆಲಸಗಾರ ಸೈಯದ್ ಆದಿಲ್ ಹುಸೇನ್ ಶಾ (28).
ಘಟನೆಯ ವಿವರ: ಬೈಸರನ್‌ಗೆ ಕುದುರೆಯ ಮೇಲೆ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಆದಿಲ್, ಬಂದೂಕುಧಾರಿಗಳು ಗುಂಡು ಹಾರಿಸಿದಾಗ ಕುಟುಂಬವೊಂದಕ್ಕೆ ಮಾರ್ಗದರ್ಶನ ನೀಡುತ್ತಿದ್ದರು.
ಉಗ್ರರು ದಾಳಿ ನಡೆಸಿದ ವೇಳೆ ತಪ್ಪಿಸಿಕೊಂಡು ಹೋಗುವ ಬದಲಿಗೆ ಆದಿಲ್, ಭಯೋತ್ಪಾದಕನ ಬಳಿ ಧಾವಿಸಿ ಬಂದೂಕನ್ನು ಕಸಿದುಕೊಳ್ಳಲು ಯತ್ನಿಸಿದರು. ಈ ಸಂದರ್ಭದಲ್ಲಿ ದೊರೆತ ಅಲ್ಪ ಅವಧಿಯು ಪ್ರವಾಸಿಗರಿಗೆ ಅಲ್ಲಿಂದ ತಪ್ಪಿಸಿಕೊಳ್ಳಲು ಅವಕಾಶ ಒದಗಿಸಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ವಿವರಿಸಿದರು.
ಬಂದೂಕು ಕಸಿದುಕೊಳ್ಳುವ ಆದಿಲ್ ಯತ್ನ ವಿಫಲವಾಯಿತು. ಭಯೋತ್ಪಾದಕನ ಗುಂಡಿಗೆ ಸ್ಥಳದಲ್ಲಿಯೇ ಅವರು ಕೊನೆಯುಸಿರೆಳೆದರು. ಆದರೆ, ಅವರು ತೋರಿದ ಈ ಧೈರ್ಯದಿಂದ ಕೆಲ ಪ್ರವಾಸಿಗರಿಗೆ ತಪ್ಪಿಸಿಕೊಳ್ಳಲು ಸಮಯಾವಕಾಶ ದೊರೆಯಿತು. ಭಯೋತ್ಪಾದಕರಿಗೆ ಆದಿಲ್ ತೋರಿದ ಪ್ರತಿರೋಧವನ್ನು ಕಾಶ್ಮೀರ ಮತ್ತು ಅದರಾಚೆಗೂ ಸ್ಮರಿಸಲಾಗುತ್ತದೆ. ಅದು ಕೇವಲ ಶೌರ್ಯದ ಕಥೆಯಾಗಿ ಅಲ್ಲ, ನಂಬಿಕೆ ಮತ್ತು ಅದನ್ನು ಮೀರಿದ ಮಾನವೀಯತೆಯ ಸಂಕೇತವಾಗಿ’ ಎಂದು ಅವರು ಹೇಳಿದರು.
‘ಈ ಕಾರ್ಯ ಮಾಡಲು ಆದಿಲ್ ಎರಡನೇ ಬಾರಿ ಯೋಚಿಸಲಿಲ್ಲ. ಬಂದೂಕು ಹಿಡಿದಿದ್ದ ಉಗ್ರನ ಮೇಲೆ ಏಕಾಏಕಿ ಹಾರಿದ. ಪ್ರವಾಸಿಗರ ರಕ್ಷಣೆಗಾಗಿ ತನ್ನ ಜೀವ ಕಳೆದುಕೊಂಡ’ ಎಂದು ಮತ್ತೊಬ್ಬ ಕುದುರೆ ಸವಾರಿ ನಿರ್ವಾಹಕ ಗುಲಾಂ ನಬಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭಯೋತ್ಪಾದಕರು ಬುಲೆಟ್‌ಗಳ ಮೂಲಕ ನಮ್ಮನ್ನು ವಿಭಜಿಸಲು ಬಂದಾಗ, ಆದಿಲ್ ಪ್ರೀತಿಯ ಸಂಕೇತವಾಗಿ ಎದ್ದುನಿಂತರು. ಅವರು, ಜನರ ಜೀವಗಳ ಜತೆಗೆ ನಮ್ಮ ಸಾಮೂಹಿಕ ಅಂತಃಸಾಕ್ಷಿಯನ್ನೂ ರಕ್ಷಿಸಿದರು’ ಎಂದು ಸ್ಥಳೀಯ ವ್ಯಾಪಾರಿ ಇಮ್ತಿಯಾಜ್ ಲೋನ್ ಪ್ರತಿಕ್ರಿಯಿಸಿದರು.
ಮಗನನ್ನು ಕಳೆದುಕೊಂಡ ದುಃಖದಿಂದ ಆದಿಲ್ ಅವರ ತಾಯಿ ರೋದಿಸುತ್ತಿದ್ದರು. ‘ನಮ್ಮ ಕುಟುಂಬಕ್ಕೆ ಆತನೇ ಆಧಾರವಾಗಿದ್ದ. ಆತ ಕುದುರೆ ಸವಾರಿಯ ಕೆಲಸ ಮಾಡಿ ತರುತ್ತಿದ್ದ ಹಣದ ಮೇಲೆಯೇ ಕುಟುಂಬ ನಡೆಯುತ್ತಿತ್ತು. ಈಗ ಮಗನೇ ಇಲ್ಲ. ನಮಗೆ ದಿಕ್ಕೇ ತೋಚುತ್ತಿಲ್ಲ’ ಎಂದು ಅವರ ತಾಯಿ ಕಣ್ಣೀರಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.