ADVERTISEMENT

ಪತಿಯಿಂದ ಮೋಸ,ಅವಮಾನ: ಕರಾಳ ಬದುಕೆಂದು ದುಃಖಿಸಿದ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್

ಪಿಟಿಐ
Published 12 ಜನವರಿ 2026, 10:22 IST
Last Updated 12 ಜನವರಿ 2026, 10:22 IST
<div class="paragraphs"><p>ಮೇರಿ ಕೋಮ್</p></div>

ಮೇರಿ ಕೋಮ್

   

ಪಿಟಿಐ ಚಿತ್ರ

ನವದೆಹಲಿ: ಬಾಕ್ಸಿಂಗ್‌ನಲ್ಲಿ ಆರು ಬಾರಿ ವಿಶ್ವ ಚಾಂಪಿಯನ್‌ ಆಗಿ, ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದು ಭಾರತಕ್ಕೆ ಹೆಮ್ಮೆ ಮೂಡಿಸಿರುವ ಮೇರಿ ಕೋಮ್‌ ವೈಯಕ್ತಿಕ ಜೀವನದಲ್ಲಿ ನಡೆದಿದ್ದು ಮಾತ್ರ ದುರಂತ. 

ADVERTISEMENT

ಪಿಟಿಐ ಜತೆ ಮಾತನಾಡಿರುವ ಮೇರಿ ಕೋಮ್‌, ವಿಚ್ಛೇದನ ಹಾಗೂ ಭಾವನಾತ್ಮಕವಾಗಿ ಕುಗ್ಗಿರುವ ಬಗ್ಗೆ ಹಂಚಿಕೊಂಡಿದ್ದಾರೆ.

‘ನನ್ನ ಜೀವನದ ಬಗ್ಗೆ ಏನೂ ತಿಳಿದಿಲ್ಲದವರು ನಾನು ದುರಾಸೆ ವ್ಯಕ್ತಿತ್ವ ಹೊಂದಿರುವವಳು ಎನ್ನುತ್ತಾರೆ. ಹೌದು, ಕಳೆದ ಎರಡು ವರ್ಷಗಳ ಹಿಂದೆ ನನ್ನ ಪತಿ ಓನ್ಲರ್‌ರಿಂದ ನಾನು ದೂರವಾಗಿದ್ದೇನೆ. ನಾವು ವಿಚ್ಛೇದನ ಪಡೆದಿದ್ದೇವೆ’ ಎಂದಿದ್ದಾರೆ.

‘ನಾನು ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸುವವರೆಗೂ ಎಲ್ಲವೂ ಚೆನ್ನಾಗಿತ್ತು. ಹಣಕಾಸಿನ ಸ್ಥಿತಿಯೂ ಉತ್ತಮವಾಗಿದೆ ಎಂದುಕೊಂಡಿದ್ದೆ. ಆದರೆ 2022ರಲ್ಲಿ ಗಾಯಗೊಂಡು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗಿಯಾಗಲು ಸಾಧ್ಯವಾಗದೇ ಇದ್ದಾಗ ಸತ್ಯಾಂಶ ತಿಳಿಯಿತು. ನಾನು ಹಲವಾರು ತಿಂಗಳುಗಳ ಕಾಲ ಹಾಸಿಗೆ ಹಿಡಿದಿದ್ದೆ, ಅದರ ನಂತರ ನನಗೆ ವಾಕರ್ ಅಗತ್ಯವಿತ್ತು. ಆಗಲೇ ನಾನು ನಂಬಿದ್ದ ವ್ಯಕ್ತಿ ನಂಬಿಕೆಗೆ ಅರ್ಹನಲ್ಲ ಎಂದು ಅರಿವಾಯಿತು. ಹೀಗಾಗಿ ವಿಚ್ಛೇದನವನ್ನು ಕೋರಿದೆ. ಇದನ್ನು ಜಗತ್ತಿನೊಂದಿಗೆ ಹೇಳಿಕೊಳ್ಳಬೇಕೆನಿಸಲಿಲ್ಲ’ ಎಂದು ಹೇಳಿದ್ದಾರೆ.

‘ಈ ಸಂಬಂಧದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನನ್ನ ಕುಟುಂಬಕ್ಕೆ ತಿಳಿಸಿದ್ದೆ. ಅವರು ಅರ್ಥ ಮಾಡಿಕೊಂಡರು. ಈ ವಿಚ್ಛೇದನದ ವಿಚಾರ ಖಾಸಗಿಯಾಗಿಯೇ ಇರುತ್ತದೆ ಎಂದು ನಾನು ಆಶಿಸಿದ್ದೆ. ಆದರೆ ಕಳೆದ ಒಂದು ವರ್ಷದಿಂದ ನನ್ನ ಮೇಲೆ ದೋಷಾರೋಪ ಮಾಡಲಾಗುತ್ತಿದೆ. ನಾನು ಪ್ರತಿಕ್ರಿಯಿಸಬಾರದು ಎಂದುಕೊಂಡಿದ್ದೆ. ಆದರೆ ನನ್ನ ಮೌನವನ್ನೂ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದ್ದು, ಟೀಕೆಗಳು ಹೆಚ್ಚುತ್ತಲೇ ಇದ್ದವು’ ಎಂದು ಬೇಸರಿಸಿಕೊಂಡಿದ್ದಾರೆ.‌

ಪ್ರಸ್ತುತ ಫರೀದಾಬಾದ್‌ನಲ್ಲಿ ವಾಸಿಸುತ್ತಿರುವ ಮೇರಿ ಕೋಮ್‌, ಪತಿಯ ಮೋಸದ ಬಗ್ಗೆ ವಿವರಿಸುತ್ತಾ, ‘ನನ್ನ ಪತಿ ಸಾಲ ತೆಗೆದುಕೊಳ್ಳುತ್ತಲೇ ಇದ್ದರು. ನನ್ನ ಆಸ್ತಿಯನ್ನು ಅವರ ಹೆಸರಿಗೆ ವರ್ಗಾಯಿಸಿಕೊಂಡರು, ಅದನ್ನು ಅಡವಿಟ್ಟು ಸಾಲ ಪಡೆದರು. ಚುರ್‌ಚಾಂದ್‌ಪುರದ ಸ್ಥಳೀಯರಿಂದ ಹಣವನ್ನು ಎರವಲು ಪಡೆದ್ದರು. ಅದನ್ನು ವಸೂಲಿ ಮಾಡಲು, ಅವರು ರಹಸ್ಯವಾಗಿ ಜಮೀನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪತಿಯನ್ನು ಕೇಳಿದರೆ, ನಾನು ಯಾವುದೇ ತಪ್ಪಾದ ಕೆಲಸದಲ್ಲಿ ಭಾಗಿಯಾಗಿಲ್ಲ ಎನ್ನುತ್ತಾರೆ’ ಎಂದು ಮರುಗಿದರು.

ಮಣಿಪುರದ ಓನ್ಲರ್‌ ಎನ್ನುವವರನ್ನು 2005ರಲ್ಲಿ ಮದುವೆಯಾಗಿದ್ದ ಮೇರಿ ಕೋಮ್‌ ಅವರು 2023ರಲ್ಲಿ ಎರಡು ದಶಕಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು.

ಮಾಧ್ಯಮಗಳಿಂದ ಅವಮಾನ

‘ನನ್ನದು ದುರಾಸೆಯ ವ್ಯಕ್ತಿತ್ವ ಎಂದು ಜರಿದ ವರದಿಗಳು ಪ್ರಕಟಗೊಂಡಿವೆ. 2022ರ ಮಣಿಪುರ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ನನ್ನನ್ನು ಒತ್ತಾಯಿಸಿದ್ದರು. ಆದರೆ ನಾನು ಪ್ರತಿಕ್ರಿಯಿಸಲಿಲ್ಲ. ನನ್ನ ಮತ್ತು ಪತಿಯ ನಡುವೆ ಮಾತ್ರ ಚರ್ಚೆಯಾದ ವಿಷಯಗಳನ್ನು ಪತ್ರಿಕೆಗಳಿಗೆ ನೀಡಲಾಗಿದೆ. ನನ್ನನ್ನು ಖಳನಾಯಕಿಯಂತೆ ಚಿತ್ರಿಸಲಾಗುತ್ತಿದೆ. ನನ್ನ ಪಾತ್ರವನ್ನು ಪ್ರಶ್ನಿಸಲಾಗುತ್ತಿದೆ. ನಾನು ಒಂದು ಹಂತದಲ್ಲಿ ಈ ಎಲ್ಲದಕ್ಕೂ ಪ್ರತಿಕ್ರಿಯಿಸಬೇಕಾಯಿತು’ ಎಂದಿದ್ದಾರೆ.

‘ಇಷ್ಟೆಲ್ಲಾ ಅವಮಾನ ಎದುರಿಸಬೇಕೆಂದರೆ ನನ್ನ ಸಾಧನೆಗಳಿಗೆ ಅರ್ಥವೇನು? ನಾನು ಜರ್ಜರಿತಳಾಗಿದ್ದೇನೆ. ನನಗೆ ನಾನೇ ಸಂತೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನಾನು ನಾಲ್ಕು ಮಕ್ಕಳನ್ನು ಸಾಕಬೇಕು. ನನ್ನ ಪೋಷಕರೂ ನನ್ನನ್ನೇ ಅವಲಂಬಿಸಿದ್ದಾರೆ. ನಾನು ಯಾವುದೇ ಪೊಲೀಸರಿಗೆ ದೂರುಗಳನ್ನೂ ನೀಡಿಲ್ಲ. ನನ್ನನ್ನು ನಿಂದಿಸುವುದನ್ನು ಬಿಟ್ಟು, ಒಂಟಿಯಾಗಿರಲು ಬಿಡಿ ಎಂದಷ್ಟೇ ಅವರೆಲ್ಲರನ್ನೂ ಕೇಳಿಕೊಳ್ಳುತ್ತೇನೆ’ ಎಂದು ಕಣ್ಣೀರಾಗಿದ್ದಾರೆ.

‘ನನ್ನ ಮಕ್ಕಳಿಗಾಗಿ ಕಷ್ಟಪಟ್ಟಾದರೂ ಕೆಲಸ ಮಾಡುತ್ತೇನೆ. ಇದು ಎಷ್ಟು ಕಷ್ಟ ಎಂದು ದೇವರಿಗೂ ಗೊತ್ತು. ಆದರೆ ಮಕ್ಕಳಿರುವಾಗ ಸುಮ್ಮನಿರಲು ಹೇಗೆ ಸಾಧ್ಯ? ನಮ್ಮನ್ನು ನಾವು ಮೇಲೆತ್ತಿಕೊಳ್ಳಲೇಬೇಕು’ ಎಂದಿದ್ದಾರೆ.

2021ರಲ್ಲಿ ಕೇಂದ್ರ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿಗೂ ಮೇರಿ ಕೋಮ್ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.