ರಿಲಯನ್ಸ್ ಉದ್ದಿಮೆಗಳ ಸಮೂಹದ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಕುಂಭಮೇಳದಲ್ಲಿ ಕುಟುಂಬಸಹಿತ ಪುಣ್ಯಸ್ನಾನ ಮಾಡಿ, ತ್ರಿವೇಣಿ ಸಂಗಮದಲ್ಲಿ ಗಂಗಾ ಪೂಜೆ ನೆರವೇರಿಸಿದರು
-ಪಿಟಿಐ ಚಿತ್ರ
ಮಹಾಕುಂಭನಗರ: ಮಾಘ ಹುಣ್ಣಿಮೆ ಪ್ರಯುಕ್ತ ಉತ್ತರ ಪ್ರದೇಶದ ಪ್ರಯಾಗ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಇಂದು (ಬುಧವಾರ) ಪುಣ್ಯ ಸ್ನಾನ ಮಾಡಲು ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಾಘ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
‘ರಾಜ್ಯದ ಎಲ್ಲಾ ಭಕ್ತಾದಿಗಳು ಮತ್ತು ನಿವಾಸಿಗಳಿಗೆ ಪವಿತ್ರ ಸ್ನಾನದ ಹಬ್ಬ ‘ಮಾಘ ಪೂರ್ಣಿಮೆ’ಯಂದು ಹೃತ್ಪೂರ್ವಕ ಶುಭಾಶಯಗಳು! ಈ ಬಾರಿಯ ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲು ಆಗಮಿಸಿದ ಎಲ್ಲಾ ಸಂತರು, ಧಾರ್ಮಿಕ ಮುಖಂಡರು, ಕಲ್ಪವಾಸಿಗಳು ಮತ್ತು ಭಕ್ತಾದಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಪ್ರಯಾಗ್‌ರಾಜ್ ಕುಂಭಮೇಳವು ಇಂದು ಎಲ್ಲರಿಗೂ ಸಂತೋಷ, ಸಮೃದ್ಧಿಯನ್ನು ಕರುಣಿಸಲಿ. ಗಂಗಾ ಮಾತೆ, ಯಮುನಾ ಮಾತೆ ಮತ್ತು ಸರಸ್ವತಿ ತಾಯಿಯ ಕೃಪೆಯು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾಘ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡುತ್ತಿರುವ ಭಕ್ತರು ಮತ್ತು ತಪಸ್ವಿಗಳ ಮೇಲೆ ಹೆಲಿಕಾಪ್ಟರ್‌ನಲ್ಲಿ ‘ಹೂವಿನ ಮಳೆ’ ಸುರಿಸಲಾಗಿದೆ.
ಅಂದಾಜಿನ ಪ್ರಕಾರ, ತ್ರಿವೇಣಿ ಸಂಗಮದಲ್ಲಿಯೇ 10 ಲಕ್ಷಕ್ಕೂ ಅಧಿಕ ಭಕ್ತರು ‘ಕಲ್ಪವಾಸ್’ನಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
ಪುಣ್ಯ ನದಿಯ ತಟದಲ್ಲಿ ನಿಗದಿತ ಕಾಲ ನೆಲಸಿ, ಉಪವಾಸದ ಮೂಲಕ ಆತ್ಮದ ಅವಲೋಕನ ಹಾಗೂ ಆಧ್ಯಾತ್ಮಿಕ ಶುದ್ಧೀಕರಣ ಪ್ರಕ್ರಿಯೆಗೆ ‘ಕಲ್ಪವಾಸ್’ ಎಂದು ಕರೆಯಲಾಗುತ್ತದೆ. ಮಹಾಕುಂಭಮೇಳದ ಅವಧಿಯಲ್ಲಿ ನಡೆಸುವ ‘ಕಲ್ಪವಾಸ್’ ಅನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗಿದೆ.
‘ಮಾಘ ಹುಣ್ಣಿಮೆಯಂದು ನಡೆಸುವ ಪುಣ್ಯಸ್ನಾನಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮಂಗಳವಾರ ಬೆಳಿಗ್ಗೆ 4 ಗಂಟೆಯಿಂದ ಬುಧವಾರ ಸಂಜೆ 5 ಗಂಟೆಯವರೆಗೆ ಇಡೀ ಮಹಾಕುಂಭ ನಗರವನ್ನು ‘ವಾಹನ ಮುಕ್ತ ವಲಯ’ವಾಗಿ ಮಾಡಲಾಗಿದ್ದು, ತುರ್ತು, ಅಗತ್ಯ ವಸ್ತುಗಳನ್ನು ಪೂರೈಸುವ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.