ADVERTISEMENT

24 ವರ್ಷಗಳ ಹಿಂದಿನ ಮಾನನಷ್ಟ ಪ್ರಕರಣ: ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಬಂಧನ

ಪಿಟಿಐ
Published 25 ಏಪ್ರಿಲ್ 2025, 9:25 IST
Last Updated 25 ಏಪ್ರಿಲ್ 2025, 9:25 IST
<div class="paragraphs"><p>ಮೇಧಾ ಪಾಟ್ಕರ್</p></div>

ಮೇಧಾ ಪಾಟ್ಕರ್

   

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು 24 ವರ್ಷಗಳ ಹಿಂದೆ ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ನರ್ಮದಾ ಬಚಾವೋ ಆಂದೋಲನದ ನಾಯಕಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪ್ರೊಬೇಷನ್ ಬಾಂಡ್‌ಗಳನ್ನು ಸಲ್ಲಿಸದ ಕಾರಣ ಪಾಟ್ಕರ್ ವಿರುದ್ಧ ದೆಹಲಿ ನ್ಯಾಯಾಲಯ ಬುಧವಾರ (ಏ.23) ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ADVERTISEMENT

ಪಾಟ್ಕರ್ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಈ ಹಿನ್ನೆಲೆ ಆಗ್ನೇಯ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿರುವ ಪಾಟ್ಕರ್ ಅವರ ನಿವಾಸಕ್ಕೆ ಇಂದು ಬೆಳಿಗ್ಗೆ ತೆರಳಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ) ರವಿಕುಮಾರ್ ಸಿಂಗ್ ಹೇಳಿದ್ದಾರೆ.

2000ನೇ ಇಸವಿಯಲ್ಲಿ ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ಪಾಟ್ಕರ್ ಅಪರಾಧಿ ಎಂದು ತೀರ್ಪು ನೀಡಿದ್ದ ದೆಹಲಿ ನ್ಯಾಯಾಲಯ 5 ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ವಿಶಾಲ್‌ ಸಿಂಗ್‌, ಪಾಟ್ಕರ್ ಅವರ ವಯಸ್ಸು, ಅಪರಾಧದ ತೀವ್ರತೆ ಮತ್ತು ಅವರು ಈ ಹಿಂದೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗದೇ ಇರುವುದನ್ನು ಪರಿಗಣಿಸಿ ಏಪ್ರಿಲ್ 8ರಂದು ಪ್ರೊಬೇಷನ್‌ ಅವಧಿ ವಿಧಿಸಿ ಆದೇಶಿಸಿದ್ದರು.

ಪ್ರೊಬೇಷನ್‌ ಅವಧಿಯಲ್ಲಿ ಅಪರಾಧಿಗಳನ್ನು ಜೈಲಿನಲ್ಲಿ ಇರಿಸದೆ, ಅವರ ದೈನಂದಿನ ಚಟುವಟಿಕೆಯ ಮೇಲೆ ನಿಗಾ ಇಡಲಾಗುತ್ತದೆ.

ಆದೇಶದ ಪ್ರಕಾರ, ಏಪ್ರಿಲ್ 23ರೊಳಗೆ ಪ್ರೊಬೇಷನ್ ಬಾಂಡ್‌ಗಳನ್ನು ಸಲ್ಲಿಸುವಂತೆ ಪಾಟ್ಕರ್ ಅವರಿಗೆ ಸೂಚಿಸಲಾಗಿತ್ತು. ಆದರೆ ಯಾವುದೇ ದಾಖಲೆಗಳನ್ನು ಸಲ್ಲಿಸದ ಕಾರಣ, ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.

ಪ್ರಕರಣ ಏನು?:

ಪಾಟ್ಕರ್ ತಮ್ಮ ವಿರುದ್ಧ ಹೊರಡಿಸಿದ ಪತ್ರಿಕಾ ಹೇಳಿಕೆಯೊಂದು ಮಾನಹಾನಿಕರವಾಗಿದೆ ಎಂದು ದೂರಿ ದೆಹಲಿ ಲೆಫ್ಟಿನೆಂಟ್ ಗವರ್ನರ್‌ ವಿ.ಕೆ.ಸಕ್ಸೇನಾ ಅವರು 2000ನೇ ಇಸವಿಯಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಆಗ ಸಕ್ಸೇನಾ ಅವರು ನ್ಯಾಷನಲ್ ಕೌನ್ಸಿಲ್ ಆಫ್ ಸಿವಿಲ್‌ ಲಿಬರ್ಟೀಸ್‌ನ ಅಧ್ಯಕ್ಷರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.