ADVERTISEMENT

Honeymoon Murder: ರಾಜ ರಘುವಂಶಿ ಅಂತ್ಯಕ್ರಿಯೆಗೆ ಜನರನ್ನು ಕರೆದೊಯ್ದಿದ್ದ ಆರೋಪಿ

ಪಿಟಿಐ
Published 10 ಜೂನ್ 2025, 4:29 IST
Last Updated 10 ಜೂನ್ 2025, 4:29 IST
   

ಇಂದೋರ್: ಮೇಘಾಲಯದಲ್ಲಿ ನಡೆದ ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿ ಅವರ ಹತ್ಯೆಯಲ್ಲಿ ಭಾಗಿಯಾಗಿದ ಆರೋಪದ ಮೇಲೆ ಬಂಧಿಸಲ್ಪಟ್ಟ ವ್ಯಕ್ತಿಗಳಲ್ಲಿ ಒಬ್ಬ ರಘುವಂಶಿ ಅವರ ಅಂತ್ಯಕ್ರಿಯೆಗೆ ಜನರನ್ನು ಕರೆದೊಯ್ದಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ .

'ರಾಜ ರಘುವಂಶಿ ಅವರ ಮೃತದೇಹವನ್ನು ಇಂದೋರ್‌ಗೆ ತರಲಾಗಿತ್ತು. ಗೋವಿಂದನಗರದ ಖಾರ್ಚಾ ಪ್ರದೇಶದಲ್ಲಿ ನೆಲೆಸಿದ್ದ ಸೋನಮ್‌ ಅವರ ಕುಟುಂಬವು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಜನರಿಗೆ ನಾಲ್ಕೈದು ವಾಹನಗಳ ವ್ಯವಸ್ಥೆ ಮಾಡಿತ್ತು. ನಾನು ಹೋದ ವಾಹನವನ್ನು ರಾಜ್ ಸಿಂಗ್ ಕುಶ್ವಾಹ(ಬಂಧಿತ ಆರೋಪಿಗಳಲ್ಲಿ ಒಬ್ಬ) ಚಾಲನೆ ಮಾಡುತ್ತಿದ್ದ. ಆದರೆ ನಾವು ಅವನೊಂದಿಗೆ ಮಾತನಾಡಲಿಲ್ಲ. ಬಂಧನದ ನಂತರ ಮಾಧ್ಯಮಗಳಲ್ಲಿ ಆತನ ಛಾಯಾಚಿತ್ರವನ್ನು ನೋಡಿದ ನಂತರ ಘಟನೆ ನೆನಪಾಯಿತು' ಎಂದು ಸೋನಮ್‌ ನೆರೆಹೊರೆಯವರಾದ ಲಕ್ಷ್ಮಣ್ ಸಿಂಗ್ ರಾಥೋಡ್ ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆ

ಇಂದೋರ್‌ನ ಸಾರಿಗೆ ಉದ್ಯಮಿ ರಾಜ ರಘುವಂಶಿ, ಸೋನಮ್ ಅವರನ್ನು ಮೇ 11ರಂದು ವಿವಾಹವಾಗಿದ್ದರು. ಮಧುಚಂದ್ರಕ್ಕಾಗಿ ಮೇಘಾಲಯಕ್ಕೆ ತೆರಳಿದ್ದರು. ಮೇ 23ರಂದು ದಂಪತಿ ನಾಪತ್ತೆಯಾಗಿದ್ದರು. ಜೂನ್‌ 2ರಂದು ರಘುವಂಶಿ ಅವರ ಶವ ಶಿಲ್ಲಾಂಗ್‌ ಸಮೀಪದ ಜಲಪಾತದ ಕಮರಿಯಲ್ಲಿ ಸಿಕ್ಕಿತ್ತು. ಸೋನಮ್‌ಗಾಗಿ ಪೊಲೀಸರು ಶೋಧ ಮುಂದುವರಿಸಿದ್ದರು.

ADVERTISEMENT

ಜೂನ್‌ 9ರಂದು ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿತ್ತು. ಉತ್ತರ ಪ್ರದೇಶದ ಗಾಜಿಪುರದ ನಂದಗಂಜ್ ಪೊಲೀಸ್‌ ಠಾಣೆಯಲ್ಲಿ ರಾಜ ರಘುವಂಶಿ ಪತ್ನಿ ಸೋನಮ್ ಶರಣಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಘಾಲಯ ಪೊಲೀಸರು ರಘುವಂಶಿ ಅವರ ಪತ್ನಿ ಸೋನಮ್ (25), ಆಕೆಗೆ ಸಹಕರಿಸಿದ್ದ ಆಕಾಶ್ ರಜಪೂತ್ (19), ವಿಶಾಲ್ ಸಿಂಗ್ ಚೌಹಾಣ್ (22) ಮತ್ತು ರಾಜ್ ಸಿಂಗ್ ಕುಶ್ವಾಹ (21) ಎಂಬುವವರನ್ನು ಬಂಧಿಸಿದ್ದಾರೆ.

ಪತಿಯನ್ನು ಕೊಲ್ಲುವಂತೆ ಸೋನಮ್‌ ಸುಪಾರಿ ನೀಡಿದ್ದರು ಎಂದು ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೇಘಾಲಯದ ಪೊಲೀಸ್‌ ಮಹಾನಿರ್ದೇಶಕ ಐ. ನಾನ್ರಾಂಗ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.