ADVERTISEMENT

ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆ: ಗರಿಷ್ಠ ಮಟ್ಟಕ್ಕೆ ಮೆಟ್ಟೂರು ಜಲಾಶಯ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 14:11 IST
Last Updated 28 ಜೂನ್ 2025, 14:11 IST
ಮೆಟ್ಟೂರು ಜಲಾಶಯ
ಮೆಟ್ಟೂರು ಜಲಾಶಯ   

ಚೆನ್ನೈ: ಕರ್ನಾಟಕದ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ತಮಿಳುನಾಡಿನ ಮೆಟ್ಟೂರಿನಲ್ಲಿರುವ ಸ್ಟ್ಯಾನ್ಲಿ ಜಲಾಶಯದ ಒಳಹರಿವಿನ ಪ್ರಮಾಣ 81,000 ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. ಇದರ ಪರಿಣಾಮ ಜಲಾಶಯವು ಇನ್ನೆರಡು ದಿನಗಳಲ್ಲಿಯೇ ತನ್ನ ಗರಿಷ್ಠ ಮಟ್ಟವಾದ 120 ಅಡಿ ತಲುಪುವ ಸಾಧ್ಯತೆಯಿದೆ. 

ಒಳಹರಿವು ಹೆಚ್ಚಿರುವ ಕಾರಣಕ್ಕೆ ತಮಿಳುನಾಡಿನ ಲೋಕೋಪಯೋಗಿ ಇಲಾಖೆಯು ಈರೋಡ್‌, ನಾಮಕ್ಕಲ್‌, ಕರೂರ್‌, ಅರಿಯಲೂರ್‌, ತಿರುಚ್ಚಿ, ತಂಜಾವೂರು, ತಿರುವರೂರ್‌, ಮೈಲಾಡತುರೈ, ನಾಗಪಟ್ಟಣಂ ಮತ್ತು ಕಡಲೂರು ಭಾಗದ ಜನರಿಗೆ ಪ್ರವಾಹದ ಎಚ್ಚರಿಕೆ ನೀಡಿದೆ. 

ಮೆಟ್ಟೂರು ಜಲಾಶಯದ ನೀರಿನ ಮಟ್ಟ ಶನಿವಾರ 117.930 ಅಡಿಗೆ ಏರಿಕೆಯಾಗಿದೆ. ಒಳಹರಿವು 80,984 ಕ್ಯೂಸೆಕ್ಸ್‌ಗಳಷ್ಟಿದ್ದು, ಶೀಘ್ರದಲ್ಲಿಯೇ 120 ಅಡಿ ತಲುಪುವ ಸಾಧ್ಯತೆಯಿದೆ. ಸದ್ಯಕ್ಕೆ 26,000 ಕ್ಯೂಸೆಕ್ಸ್‌ನಷ್ಟು ನೀರನ್ನು ಹೊರಬಿಡಲಾಗುತ್ತಿದ್ದು, ಅದನ್ನು ಕ್ರಮೇಣ 50,000 ಕ್ಯೂಸೆಕ್ಸ್‌, ನಂತರ 75,000 ಕ್ಯೂಸೆಕ್ಸ್‌ಗೆ ಏರಿಸಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.   

ADVERTISEMENT

ಆದ್ದರಿಂದ ನದಿಯ ದಡದಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಮತ್ತು ಜೀವ, ಆಸ್ತಿ ಪಾಸ್ತಿ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಸಲಹೆ ನೀಡಿದೆ.  

ಸುಮಾರು 91 ವರ್ಷಗಳಷ್ಟು ಹಳೆಯದಾದ ಸ್ಟ್ಯಾನ್ಲಿ ಜಲಾಶಯವು ಈ ವರ್ಷ ಸದ್ಯದಲ್ಲಿಯೇ ಮೊದಲ ಬಾರಿಗೆ ಗರಿಷ್ಠ ಮಟ್ಟ ತಲುಪಲಿದೆ. ವಾಡಿಕೆಯಂತೆ ಜೂನ್‌ 12ರಿಂದ ಕುರುವೈ (ಅಲ್ಪಾವಧಿ) ಬೆಳೆಗಾಗಿ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಕಳೆದ ವರ್ಷ ನೀರಿನ ಅಭಾವವಿದ್ದ ಕಾರಣ ಜೂನ್‌ 12ರ ಬದಲಿಗೆ ಜುಲೈ 28ರಂದು ನೀರನ್ನು ಹರಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.