ADVERTISEMENT

ನರೇಗಾವನ್ನು ಬುಲ್ಡೋಜ್ ಮಾಡಲಾಗಿದೆ, ಹೊಸ ‘ಕರಾಳ ಕಾನೂನು’ ವಿರುದ್ಧ ಹೋರಾಟ: ಸೋನಿಯಾ

ಪಿಟಿಐ
Published 20 ಡಿಸೆಂಬರ್ 2025, 13:40 IST
Last Updated 20 ಡಿಸೆಂಬರ್ 2025, 13:40 IST
<div class="paragraphs"><p>ಸೋನಿಯಾ ಗಾಂಧಿ</p></div>

ಸೋನಿಯಾ ಗಾಂಧಿ

   

– ಎಕ್ಸ್ ಚಿತ್ರ

ನವದೆಹಲಿ: ನರೇಂದ್ರ ಮೋದಿ ಸರ್ಕಾರವು ನರೇಗಾ ಯೋಜನೆಯನ್ನು ‘ಬುಲ್ಡೋಜ್’ ಮಾಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ನರೇಗಾಕ್ಕೆ ಪರ್ಯಾಯವಾಗಿ ರೂಪಿಸಿರುವ ‘ಜಿ ರಾಮ್‌ ಜಿ’ ಕಾಯ್ದೆಯನ್ನು ‘ಕರಾಳ ಕಾನೂನು’ ಎಂದಿರುವ ಅವರು, ಅದನ್ನು ಹಿಂಪಡೆಯಲು ದೇಶದಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಈ ಬಗ್ಗೆ ವಿಡಿಯೊ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ನರೇಗಾವನ್ನು ದುರ್ಬಲಗೊಳಿಸುವ ಮೂಲಕ, ಸರ್ಕಾರ ದೇಶದ ಕೋಟ್ಯಂತರ ರೈತರ, ಕಾರ್ಮಿಕರ ಹಾಗೂ ಭೂರಹಿತರ ಹಿತಾಸಕ್ತಿ ಮೇಲೆ ದಾಳಿ ನಡೆಸಿದೆ ಎಂದು ಅವರು ಟೀಕಿಸಿದ್ದಾರೆ.

ಕಳೆದ 11 ವರ್ಷದಿಂದ ಕೇಂದ್ರ ಸರ್ಕಾರವು ಗ್ರಾಮೀಣ ಬಡವರ ಹಿತಾಸಕ್ತಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

‘20 ವರ್ಷದ ಹಿಂದೆ ಸಂಸತ್ತಿನಲ್ಲಿ ನರೇಗಾ ಮಸೂದೆಗೆ ಸಂಸತ್ತು ಒಮ್ಮತದ ಒಪ್ಪಿಗೆ ಕೊಟ್ಟ ದಿನ ನನಗೆ ಚೆನ್ನಾಗಿ ನೆನಪಿದೆ. ಅದೊಂದು ಕ್ರಾಂತಿಕಾರಕ ಹೆಜ್ಜೆ. ವಂಚಿತರು, ಶೋಷಿತರು ಮತ್ತು ಅತ್ಯಂತ ಬಡವರಿಗೆ ಅದು ಜೀವನೋಪಾಯದ ಸಾಧನವಾಯಿತು’ ಎಂದು ಹೇಳಿದ್ದಾರೆ.

ನರೇಗಾದಿಂದ ಕೆಲಸ ಹುಡುಕಿಕೊಂಡು ವಲಸೆ ಹೋಗುವವರ ಸಂಖ್ಯೆ ಕಡಿಮೆಯಾಯಿತು, ಉದ್ಯೋಗದ ಕಾನೂನು ಹಕ್ಕನ್ನು ನೀಡಲಾಯಿತು, ಗ್ರಾಮ ಪಂಚಾಯಿತಿ‌ಗಳು ಬಲವರ್ಧನೆಗೊಂಡವು. ನರೇಗಾದ ಮೂಲಕ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಆಧಾರಿತ ಭಾರತದ ಕನಸನ್ನು ನನಸು ಮಾಡುವ ದೃಢ ಹೆಜ್ಜೆ ಇಡಲಾಯಿತು’ ಎಂದು ಹೇಳಿದ್ದಾರೆ.

ವಿಷಾದದ ಸಂಗತಿಯೊಂದು ಈಚೆಗೆ ನಡೆಯಿತು. ನರೇಗಾದ ಮೇಲೆ ಸರ್ಕಾರ ಬುಲ್ಡೋಜರ್ ಹರಿಸಿತು. ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದು ಹಾಕಿತಲ್ಲದೆ, ಯಾವುದೇ ಪರ್ಯಾಲೋಚನೆ ಮಾಡದೆ, ಯಾರ ಅಭಿಪ್ರಾಯವನ್ನು ಪಡೆಯದೆ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನರೇಗಾದ ರಚನೆಯನ್ನೇ ಬದಲಿಸಲಾಯಿತು ಎಂದು ಹೇಳಿದ್ದಾರೆ.

ಹೊಸ ಕಾನೂನಿನಲ್ಲಿ ಯಾರು, ಎಷ್ಟು, ಎಲ್ಲಿ, ಯಾವ ವಿಧದ ಉದ್ಯೋಗ ಪಡೆಯುತ್ತಾರೆ ಎನ್ನುವುದನ್ನು ದೆಹಲಿಯಲ್ಲಿರುವ ಸರ್ಕಾರ ನಿರ್ಧಾರ ಮಾಡುತ್ತದೆ. ಇದು ವಾಸ್ತವಕ್ಕೆ ವಿರುದ್ಧವಾದುದು ಎಂದಿದ್ದಾರೆ.

ನರೇಗಾ ರಾಷ್ಟ್ರೀಯ ಹಾಗೂ ಜನರ ಹಿತಾಸಕ್ತಿಯೊಂದಿಗೆ ಸಂಬಂಧವಿದ್ದ ಯೋಜನೆ. ಅದನ್ನು ದುರ್ಬಲಗೊಳಿಸುವ ಮೂಲಕ ಮೋದಿ ಸರ್ಕಾರವು, ಕೋಟ್ಯಂತರ ರೈತರ, ಕಾರ್ಮಿಕರ ಹಾಗೂ ಭೂ ರಹಿತ ಬಡವರ ಹಿತಾಸಕ್ತಿಗಳ ಮೇಲೆ ದಾಳಿ ನಡೆಸಿದೆ ಎಂದು ಹೇಳಿದ್ದಾರೆ.

‘ನಾವು ಈ ದಾಳಿಗೆ ತಿರುಗೇಟು ನೀಡಲು ಸಿದ್ಧರಾಗಿದ್ದೇವೆ. ನಮ್ಮ ಸೋದರ, ಸೋದರಿಯರಿಗೆ ಉದ್ಯೋಗದ ಹಕ್ಕನ್ನು ನೀಡಲು ನಾನೂ ಹೋರಾಟ ಮಾಡಿದ್ದೇನೆ. ಇಂದು ನಾನು ಹೊಸ ಕರಾಳ ಕಾನೂನಿನ ವಿರುದ್ಧ ಹೋರಾಟ ಮಾಡಲು ಬದ್ಧಳಾಗಿದ್ದೇನೆ. ಕಾಂಗ್ರೆಸ್‌ನ ಎಲ್ಲಾ ನಾಯಕರು ಕೋಟ್ಯಂತರ ಕಾರ್ಯಕರ್ತರು ನಿಮ್ಮ ಜೊತೆಗಿದ್ದಾರೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ಕಾನೂನನ್ನು ಹಿಂಪಡೆಯಲು ತಳಮಟ್ಟದ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.