ADVERTISEMENT

ವಿಮಾನ ಬಾಡಿಗೆಗೆ ಪಡೆದು ಆಗಸದಲ್ಲೇ ವಿವಾಹ: ಕೋವಿಡ್‌ ನಿಯಮಗಳೆಲ್ಲ ಗಾಳಿಗೆ

ಬಾಡಿಗೆಗೆ ಪಡೆದಿದ್ದ ಸ್ಪೈಸ್ ಜೆಟ್ ವಿಮಾನ

ಪಿಟಿಐ
Published 24 ಮೇ 2021, 11:41 IST
Last Updated 24 ಮೇ 2021, 11:41 IST
ವಿಮಾನದಲ್ಲಿ ಮದುವೆಯಾದ ಜೋಡಿ
ವಿಮಾನದಲ್ಲಿ ಮದುವೆಯಾದ ಜೋಡಿ    

ನವದೆಹಲಿ: ತಮಿಳುನಾಡಿನ ಜೋಡಿಯೊಂದು ವಿಮಾನವೊಂದನ್ನು ಬಾಡಿಗೆ ಪಡೆದು ಆಗಸದಲ್ಲೇ ವಿವಾಹವಾಗಿದ್ದು, ಕೋವಿಡ್‌ ನಿಯಮ ಉಲ್ಲಂಘಿಸಿದ ಕಾರಣ ದೂರು ದಾಖಲಾಗಿದೆ.

‘ಮದುರೈನ ಜೋಡಿಯೊಂದು ಮೇ 23ರಂದು ಸ್ಪೈಸ್ ಜೆಟ್ ವಿಮಾನವೊಂದನ್ನು ಸುಮಾರು 2 ಗಂಟೆಗಳ ಕಾಲ ಬಾಡಿಗೆ ಪಡೆದು ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾಗಿದೆ. ಆದರೆ, ಈ ಸಮಯದಲ್ಲಿ ಕೋವಿಡ್‌–19 ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಕಾಪಾಡುವ ನಿಯಮಗಳನ್ನು ಗಾಳಿಗೆ ತೂರಿದೆ’ ಎಂದು ಸೋಮವಾರ ಮೂಲಗಳು ತಿಳಿಸಿವೆ.

‘ವಿಮಾನದಲ್ಲಿ ಕೋವಿಡ್ ನಿಯಮ ಪಾಲಿಸದ ಕಾರಣಕ್ಕಾಗಿ ಸ್ಪೈಸ್‌ಜೆಟ್ ವಿಮಾನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಮಹಾನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ವಿಮಾನದಲ್ಲಿ ವಿವಾಹವಾದ ಚಿತ್ರಗಳು ಮತ್ತು ವಿಡಿಯೊಗಳು ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿವೆ. ಈ ವಿಡಿಯೊ ಮತ್ತು ಚಿತ್ರಗಳಲ್ಲಿ ಜನರು ಪರಸ್ಪರ ಅಂತರ ಮರೆತು ನವದಂಪತಿ ಸಮೀಪದಲ್ಲೇ ನಿಂತಿರುವುದು ಕಾಣುತ್ತದೆ.

‘ಮದುರೈನ ಟ್ರಾವೆಲ್ ಏಜೆಂಟ್‌ವೊಬ್ಬರ ಮೂಲಕ ಮೇ 23ರಂದು ಸ್ಪೈಸ್ ಜೆಟ್ ಬೋಯಿಂಗ್ –737 ಚಾರ್ಟರ್ಡ್ ಫೈಟ್ ಅನ್ನು ಬುಕ್ ಮಾಡಲಾಗಿತ್ತು. ವಿವಾಹ ನಂತರದ ಸಂತೋಷದ ಸವಾರಿಗಾಗಿ (ಜಾಲಿರೈಡ್) ಗುಂಪೊಂದಕ್ಕೆ ಈ ವಿಮಾನವನ್ನು ಬುಕ್ ಮಾಡಲಾಗಿತ್ತು. ಕೋವಿಡ್ ನಿಯಮ ಪಾಲನೆ ಕುರಿತು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಲಾಗಿತ್ತು. ಅಲ್ಲದೇ ಇದರಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಮಾಡಲು ಅನುಮತಿ ನೀಡಿರಲಿಲ್ಲ’ ಎಂದು ಸ್ಪೈಸ್ ಜೆಟ್ ವಕ್ತಾರ ತಿಳಿಸಿದ್ದಾರೆ.

‘ವಿಮಾನದ ಸಿಬ್ಬಂದಿ ಪ್ರಯಾಣಿಕರ ಗುಂಪಿಗೆ ಪದೇಪದೇ ಕೋವಿಡ್ ನಿಯಮ ಪಾಲಿಸುವಂತೆ ಸೂಚಿಸಿತ್ತು. ಅಲ್ಲದೇ, ಫೋಟೊ ಮತ್ತಿ ವಿಡಿಯೊ ಚಿತ್ರೀಕರಣ ಮಾಡಬಾರದು ಎಂದೂ ಹೇಳಿತ್ತು. ಆದರೂ ಈ ನಿಯಮಗಳನ್ನು ಗುಂಪು ಪಾಲಿಸಿಲಿಲ್ಲ. ಹಾಗಾಗಿ, ಅವರ ವಿರುದ್ದ ಸೂಕ್ತಕ್ರಮ ಕೈಗೊಳ್ಳಲಾಗುವುದು’ ಎಂದೂ ಸ್ಪೈಸ್‌ಜೆಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.