
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳು, ಕ್ರೈಸ್ತರು, ಬೌದ್ಧರನ್ನು ಒಳಗೊಂಡು ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದೆ.
ಕಳೆದ ವಾರ ಮೈಮೆನ್ಸಿಂಗ್‌ನಲ್ಲಿ ನಡೆದ ಹಿಂದೂ ವ್ಯಕ್ತಿಯ ಹತ್ಯೆಯಲ್ಲಿ ಭಾಗಿಯಾದ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಭಾರತ ಒತ್ತಾಯಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 'ಬಾಂಗ್ಲಾದೇಶದಲ್ಲಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಹಿಂದೂಗಳು, ಕ್ರೈಸ್ತರು, ಬೌದ್ಧರನ್ನು ಒಳಗೊಂಡು ಅಲ್ಪಸಂಖ್ಯಾತರ ಮೇಲೆ 2,900ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಇದನ್ನು ಭಾರತ ಗಂಭೀರವಾಗಿ ಪರಿಗಣಿಸಿದೆ. ಜತೆಗೆ ಅಲ್ಲಿನ ರಾಜಕೀಯ ಬಿಕ್ಕಟ್ಟಿನ ಮೇಲೂ ನಿರಂತರವಾಗಿ ನಿಗಾ ವಹಿಸುತ್ತಿದೆ. ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯನ್ನು ರಾಜಕೀಯ ಹಿಂಸಾಚಾರ ಅಥವಾ ಮಾಧ್ಯಮಗಳ ಉತ್ಪ್ರೇಕ್ಷೆ ಎಂದು ತಳ್ಳಿ ಹಾಕುವಂತಿಲ್ಲ' ಎಂದು ಹೇಳಿದ್ದಾರೆ.
ಬಾಂಗ್ಲಾದೇಶದ ಮೈಮೆನ್ಸಿಂಗ್‌ನಲ್ಲಿ ಇತ್ತೀಚೆಗೆ ನಡೆದ ಹಿಂದೂ ಯುವಕ ದೀಪು ಚಂದ್ರದಾಸ್ ಅವರ ಭೀಕರ ಹತ್ಯೆಯನ್ನು ಖಂಡಿಸಿರುವ ಜೈಸ್ವಾಲ್, ‘ಈ ಕೃತ್ಯದಲ್ಲಿ ಭಾಗಿಯಾಗಿರುವ ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 12 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಹೇಳಿದೆ.
ದೀಪು ಚಂದ್ರದಾಸ್ ಅವರ ಬರ್ಬರ ಹತ್ಯೆಯಾದ ಬೆನ್ನಲ್ಲೇ, ಬುಧವಾರ ರಾಜ್ಬಾರಿಯ ಪಾಂಗ್ಶಾ ಎಂಬಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು(ಅಮೃತ್ ಮೊಂಡಲ್ ಅಲಿಯಾಸ್ ಸಾಮ್ರಾಟ್) ಜನರು ಥಳಿಸಿ ಕೊಂದಿದ್ದಾರೆ. ಆ ಘಟನೆಯನ್ನೂ ಉಲ್ಲೇಖಿಸಿದ ಜೈಸ್ವಾಲ್, ಇದು ದೇಶದಲ್ಲಿ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಉತ್ತಮ ಉದಾಹರಣೆ ಎಂದಿದ್ದಾರೆ.
ಮೀಸಲಾತಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ 32 ವರ್ಷದ ಯುವ ನಾಯಕ ಶರೀಫ್ ಉಸ್ಮಾನ್ ಹಾದಿ ಅವರ ಸಾವಿನ ಬಳಿಕ ಬಾಂಗ್ಲಾದೇಶ ಮತ್ತೊಮ್ಮೆ ಹೊತ್ತಿ ಉರಿಯುತ್ತಿದೆ. ಹಾದಿ ಹತ್ಯೆಗೆ ಸಂಬಂಧಿಸಿದಂತೆ ಭಾರತಕ್ಕೆ ಸಂಬಂಧ ಕಲ್ಪಿಸುವುದನ್ನು ವಿದೇಶಾಂಗ ಸಚಿವಾಲಯ ತಳ್ಳಿಹಾಕಿದೆ.
ಬಾಂಗ್ಲಾದೇಶದಲ್ಲಿ 2026ರ ಫೆಬ್ರುವರಿ 12ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯು ಮುಕ್ತವಾಗಿ, ನ್ಯಾಯಯುತವಾಗಿ ಮತ್ತು ಎಲ್ಲರನ್ನೂ ಒಳಗೊಂಡು ನಡೆಯಬೇಕು. ಈಗಿನ ರಾಜಕೀಯ ಅಸ್ಥಿರತೆ ಕೊನೆಗಾಣಿಸಿ ಬಾಂಗ್ಲಾದಲ್ಲಿ ಕಾನೂನು ಸುವ್ಯವಸ್ಥೆ ಸ್ಥಿರಗೊಳ್ಳುವಂತೆಮಾಡುವುದು ಅಲ್ಲಿನ ಸರ್ಕಾರದ ಜವಾಬ್ದಾರಿ ಎಂದು ಭಾರತ ಹೇಳಿದೆ.
ಬಾಂಗ್ಲಾದೇಶದ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಹಂಗಾಮಿ ಅಧ್ಯಕ್ಷ ತಾರಿಕ್ ರೆಹಮಾನ್ 17 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ್ದು, ಅಲ್ಲಿ ಹೊಸ ರಾಜಕೀಯ ಸ್ಥಿತ್ಯಂತರಕ್ಕೆ ವೇದಿಕೆ ಸಿದ್ಧಗೊಂಡಿರುವ ಬೆನ್ನಲ್ಲೇ, ಭಾರತ ಹೀಗೆ ಪ್ರತಿಕ್ರಿಯೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.