ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಪ್ರೇರಣೆ ನೀಡುವ ಪ್ರಚೋದನಕಾರಿ ಭಾಷಣದ ಆರೋಪಕ್ಕೆ ಸಂಬಂಧಿಸಿದಂತೆ ನಟ, ರಾಜಕಾರಣಿ, ಬಿಜೆಪಿಯ ನಾಯಕ ಮಿಥುನ್ ಚಕ್ರವರ್ತಿ ಅವರನ್ನು ಬುಧವಾರ ಕೋಲ್ಕತ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಬುಧವಾರ ಬೆಳಗ್ಗೆ 10.30ಕ್ಕೆ ಆರಂಭವಾದ ವರ್ಚುವಲ್ವಿಚಾರಣೆಯು 45 ನಿಮಿಷಗಳ ಕಾಲ ಮುಂದುವರಿಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಿಥುನ್ ಅವರು ಪುಣೆಯಲ್ಲಿರುವ ಕಾರಣವರ್ಚುವಲ್ ಆಗಿ ವಿಚಾರಣೆ ನಡೆಸಲಾಯಿತು. ಅಲ್ಲದೆ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಬುಧವಾರದಂದು 71ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಈ ಮೂಲಕ ಹುಟ್ಟುಹಬ್ಬದಂದೇ ಪೊಲೀಸ್ ವಿಚಾರಣೆಗೆ ಒಳಪಟ್ಟಿದ್ದಾರೆ.
ವಿಚಾರಣೆಯು 45 ನಿಮಿಷಗಳ ಕಾಲ ನಡೆಯಿತು. ಚಕ್ರವರ್ತಿ ಅವರನ್ನು ಅಧಿಕಾರಿಗಳು ಕನಿಷ್ಠ 12 ಪ್ರಶ್ನೆಗಳನ್ನು ಕೇಳಿದರು. ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ಅವರು ಪ್ರಚೋದನಕಾರಿ ಭಾಷಣ ಮಾಡಲು ಬಿಜೆಪಿ ಪಕ್ಷವು ಸೂಚನೆ ನೀಡಿತ್ತೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಪ್ರಶ್ನೆ ಕೇಳಲಾಗಿದೆ.
ಮಾರ್ಚ್ 7ರಂದು ಬಿಜೆಪಿ ಸೇರ್ಪಡೆಗೊಂಡಿರುವ ಮಿಥುನ್, ನೀಡಿರುವ ಗಲಭೆ ಪ್ರೇರಿತ ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಲ್ಲ ಭಾಷಣಗಳು ಚುನಾವಣೋತ್ತರ ಹಿಂಸಾಚಾರಕ್ಕೆ ಪ್ರೇರಣೆ ನೀಡಿವೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.