ADVERTISEMENT

ಡಿಎಂಕೆ ಮಣಿಸಲು ಎಸ್‌ಐಆರ್‌: ಸ್ಟಾಲಿನ್‌ ಆರೋಪ

ಪಿಟಿಐ
Published 8 ನವೆಂಬರ್ 2025, 16:04 IST
Last Updated 8 ನವೆಂಬರ್ 2025, 16:04 IST
ಎಂ.ಕೆ.ಸ್ಟಾಲಿನ್‌
ಎಂ.ಕೆ.ಸ್ಟಾಲಿನ್‌   

ಚೆನ್ನೈ: ತಮಿಳುನಾಡಿನಲ್ಲಿ ಚುನಾವಣಾ ಆಯೋಗವನ್ನು ಬಳಸಿಕೊಂಡು ಅಡ್ಡದಾರಿ ಮೂಲಕ ಅಧಿಕಾರಕ್ಕೆ ಬರಲು ಕೆಲವರು ಶ್ರಮಿಸುತ್ತಿದ್ದಾರೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಬಿಜೆಪಿಯನ್ನು ಹೆಸರಿಸದೆ ಶನಿವಾರ ಆರೋಪಿಸಿದರು.

ಪಕ್ಷದ ಯುವ ಘಟಕ ಹಮ್ಮಿಕೊಂಡಿದ್ದ ‘ಡಿಎಂಕೆ 75– ಜ್ಞಾನ ಉತ್ಸವ’ದಲ್ಲಿ ಮಾತನಾಡಿದ ಅವರು, ‘ಸೈದ್ಧಾಂತಿಕವಾಗಿ ಡಿಎಂಕೆಯನ್ನು ಸೋಲಿಸಲಾಗದವರು, ಈಗ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನೆಪದಲ್ಲಿ ಅಧಿಕಾರ ಹಿಡಿಯಲು ಹವಣಿಸುತ್ತಿದ್ದಾರೆ’ ಎಂದು ದೂರಿದರು.

‘ದೊಡ್ಡ, ದೊಡ್ಡ ಶತೃಗಳು ಭಾರಿ ಪಿತೂರಿಗಳನ್ನು ನಡೆಸಿಯೂ ಡಿಎಂಕೆ ಮತ್ತು ಅದರ ಸಿದ್ಧಾಂತವನ್ನು ಮಣಿಸಲು ಆಗಲಿಲ್ಲ. ಇದೀಗ ಅವರು ಚುನಾವಣಾ ಆಯೋಗದ ಮೂಲಕ ಬರುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಕಿಡಿಕಾರಿದರು.

ADVERTISEMENT

‘ತರಾತುರಿಯಲ್ಲಿ ಎಸ್‌ಐಆರ್‌ ಅಗತ್ಯವೇನಿತ್ತು? ರಾಜಕೀಯ ಪಕ್ಷಗಳು ವಿರೋಧಿಸಿದರೂ, ಅದನ್ನು ಗಣನೆಗೆ ತೆಗೆದುಕೊಳ್ಳದಿರಲು ಕಾರಣವೇನು’ ಎಂದು ಅವರು ಪ್ರಶ್ನಿಸಿದರು.

‘ನಮ್ಮ ಆಕ್ಷೇಪಗಳನ್ನು ಆಲಿಸದೆ ಆಯೋಗ ಎಸ್‌ಐಆರ್‌ಗೆ ಚಾಲನೆ ನೀಡಿದೆ. ಅದನ್ನು ನಾವು ಕಾನೂನಾತ್ಮಕ ಮತ್ತು ರಾಜಕೀಯವಾಗಿ ಎದುರಿಸುತ್ತೇವೆ’ ಎಂದು ಅವರು ತಿಳಿಸಿದರು. 

ಅದರ ನಡುವೆಯೂ ಪಕ್ಷದ ಕಾರ್ಯಕರ್ತರು, ನೈಜ ಮತದಾರರ ಹಕ್ಕಿಗೆ ಚ್ಯುತಿ ಬಾರದಂತೆ ನೋಡಿಕೊಳ್ಳಬೇಕು. ಯಾವುದೇ ಅರ್ಹ ಮತದಾರರನ್ನು ಪಟ್ಟಿಯಿಂದ ಕೈಬಿಡದಂತೆ ಎಚ್ಚರವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು. 

ಟಿವಿಕೆಯ ವಿಜಯ್‌ ವಿರುದ್ಧ ಟೀಕೆ:

‘ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಸ್ಥಾಪನೆಯಾದ ಬಳಿಕ ಅಧಿಕಾರಕ್ಕೆ ಬರಲು 18 ವರ್ಷಗಳ ದೀರ್ಘಕಾಲವೇ ಬೇಕಾಯಿತು. ಆದರೆ ಇತ್ತೀಚೆಗೆ ಪಕ್ಷವೊಂದನ್ನು ಸ್ಥಾಪಿಸಿರುವ ಕೆಲವರು ಸರ್ಕಾರ ರಚಿಸಿಯೇ ಬಿಡುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ’ ಎಂದು ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ, ಚಿತ್ರನಟ ವಿಜಯ್‌ ಹೆಸರನ್ನು ಪ್ರಸ್ತಾಪಿಸಿದೆ ಸ್ಟಾಲಿನ್‌ ಟೀಕಿಸಿದರು. 

ಸಾಮಾನ್ಯ ಜನರು ಸೇರಿ 1949ರಲ್ಲಿ ಸ್ಥಾಪಿಸಿದ ಡಿಎಂಕೆಯು 1967ರಲ್ಲಿ ಮೊದಲ ಬಾರಿಗೆ ಅಧಿಕಾರ ಹಿಡಿಯುವ ಸಾಧನೆ ಮಾಡಿತು. ಹೀಗೆ ಮಾಡಿದ ಮೊದಲ ರಾಜ್ಯಮಟ್ಟದ ಪಕ್ಷ ಡಿಎಂಕೆ. ಅದಕ್ಕೆ ಸಾಕಷ್ಟು ಕಾರ್ಯಕರ್ತರ ಶ್ರಮವಿದೆ. ಹಲವರ ತ್ಯಾಗ, ಬಲಿದಾನದ ಫಲವಾಗಿ ಪಕ್ಷ ಅಧಿಕಾರಕ್ಕೆ ಬಂದಿತ್ತು ಎಂದು ಅವರು ಸ್ಮರಿಸಿದರು.

‘ಪಕ್ಷವನ್ನು ನಾವು ಸ್ಥಾಪಿಸಿದ್ದೇವೆ, ಹೀಗಾಗಿ ನಾನೇ ಮುಖ್ಯಮಂತ್ರಿ ಎಂದು ಘೋಷಿಸಿಕೊಂಡು ಡಿಎಂಕೆ ಅಧಿಕಾರಕ್ಕೆ ಬಂದಿಲ್ಲ’ ಎಂದು ಅವರು ವಿಜಯ್‌ ಅನ್ನು ಟೀಕಿಸಿದರು.

‘ಇಷ್ಟೆಲ್ಲ ಇತಿಹಾಸ ತಿಳಿಯದೇ, ಡಿಎಂಕೆ ರೀತಿ ಅಧಿಕಾರಕ್ಕೆ ಬರುತ್ತೇವೆ ಎಂದು ಕೆಲವರು ಕನಸು ಕಾಣುತ್ತಿದ್ದಾರೆ. ಡಿಎಂಕೆ ರೀತಿ ಗೆಲ್ಲಬೇಕು ಎಂದರೆ, ಅದೇ ರೀತಿ ಪಕ್ಷವನ್ನು ಕಟ್ಟಿ ಬೆಳೆಸಬೇಕು. ಅದರ ಬಗ್ಗೆ ಜ್ಞಾನ ಇರಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.