ಗಾಜಿಯಾಬಾದ್(ಉತ್ತರ ಪ್ರದೇಶ): ಬಾಂಗ್ಲಾ ನುಸುಳುಕೋರರನ್ನು ಪತ್ತೆ ಮಾಡಲು ಉತ್ತರ ಪ್ರದೇಶ ಪೊಲೀಸರು ಮೊಬೈಲ್ ಸ್ಕ್ಯಾನರ್ ಬಳಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಾಜಿಯಾಬಾದ್‌ನ ಕೊಳಗೇರಿಯೊಂದರಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಶಂಕಿತ ಬಾಂಗ್ಲಾ ವಲಸಿಗರರನ್ನು ಮೊಬೈಲ್ ಸ್ಕ್ಯಾನರ್ ಮೂಲಕ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಿರುವ ದೃಶ್ಯಗಳು ವಿಡಿಯೊದಲ್ಲಿವೆ.
ಕೆಲವು ವ್ಯಕ್ತಿಗಳ ಬೆನ್ನ ಹಿಂದೆ ನಿಂತು, ಮೊಬೈಲ್‌ನಲ್ಲಿ ಅವರ ದೇಹವನ್ನು ಸ್ಕ್ಯಾನ್ ಮಾಡುತ್ತಾ, ‘ನೀವು ಬಾಂಗ್ಲಾದೇಶವರಲ್ಲವೇ ಎಂದು ಪ್ರಶ್ನಿಸುತ್ತಾರೆ. ಸುಳ್ಳು ಹೇಳಿದರೆ ಮೊಬೈಲ್‌ನಲ್ಲಿರುವ ತಂತ್ರಾಂಶ ತಕ್ಷಣವೇ ಅದನ್ನು ಪತ್ತೆ ಹಚ್ಚುತ್ತದೆ, ಸತ್ಯ ಹೇಳಿ ಎಂದು ಬೆದರಿಸಿದ್ದಾರೆ.
ಭಾರತೀಯರು ಎಂದು ಹೇಳಿದವರಿಗೂ, ಮೊಬೈಲ್‌ನಲ್ಲಿ ಬಾಂಗ್ಲಾದೇಶೀಯರು ಎಂದು ತೋರಿಸುತ್ತಿದೆ, ಸತ್ಯ ಹೇಳಿ ಎಂದು ಹೆದರಿಸಿ, ಮತ್ತೆ ಮತ್ತೆ ಪರಿಶೀಲನೆಗೆ ಒಳಪಡಿಸಲಾಗಿದೆ.
ಮೊಬೈಲ್ ಮೂಲಕ ಪೊಲೀಸರು ನಡೆಸುತ್ತಿರುವ ‘ಪೌರತ್ವ ಪರೀಕ್ಷೆ’ಯು ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಒಳಗಾಗಿದೆ.
ಮೊಬೈಲ್ ಮೂಲಕ ವ್ಯಕ್ತಿಯ ದೇಹವನ್ನು ಸ್ಕ್ಯಾನ್ ಮಾಡಿ, ನುಸುಳುಕೋರರನ್ನು, ಪೌರತ್ವನ್ನು ಪತ್ತೆ ಹೆಚ್ಚಲು ಸಾಧ್ಯವೇ ಎಂದು ಸಾಕಷ್ಟು ಜನರು ಪ್ರಶ್ನಿಸಿದ್ದಾರೆ.
‘ವಾಸ್ತವದಲ್ಲಿ ಇದು ಪೌರತ್ವ ಪರೀಕ್ಷೆ ಅಲ್ಲ. ನುಸುಳುಕೋರು ಸುಲಭವಾಗಿ ಸತ್ಯ ಹೇಳುವುದಿಲ್ಲ. ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸರು ಬಳಸಿದ ತಂತ್ರ ಇದು’ ಎಂದು ಗಾಜಿಯಾಬಾದ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.