
ಭಾರತಕ್ಕೆ ಬಂದ ಪುಟಿನ್‌ಗೆ ಮೋದಿ ನೀಡಿದ ಉಡುಗೊರೆಗಳು
ಚಿತ್ರಕೃಪೆ: ಪಿಟಿಐ
ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ರಾಜ್ಯಗಳ ಉತ್ಪನ್ನ, ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ರಷ್ಯನ್ ಭಾಷೆಯಲ್ಲಿರುವ ಭಗವದ್ಗೀತೆ
ಪುಟಿನ್ ಅವರನ್ನು ಭೇಟಿಯಾಗುತ್ತಿದ್ದಂತೆ ಮೋದಿ ಗುರುವಾರ, ರಷ್ಯನ್ ಭಾಷೆಯಲ್ಲಿ ಮುದ್ರಿತವಾದ ಶ್ರೀಮದ್ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಅಸ್ಸಾಂ ಚಹಾ ಪುಡಿ
ಅಸ್ಸಾಂನ ಬ್ರಹ್ಮಪುತ್ರ ನದಿ ತೀರದ ಫಲವತ್ತಾದ ಬಯಲು ಪ್ರದೇಶಗಳಲ್ಲಿ ಬೆಳೆಯುವ ಚಹಾ ಪುಡಿಯನ್ನು ನೀಡಿದ್ದಾರೆ. ಈ ಚಹಾ ಪುಡಿಗೆ 2007ರಲ್ಲಿ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್) ದೊರೆತಿದೆ. ರುಚಿ, ಬಣ್ಣ, ಸ್ವಾದಕ್ಕೆ ಈ ಚಹಾಪುಡಿ ಹೆಸರುವಾಸಿಯಾಗಿದೆ.
ಬೆಳ್ಳಿಯ ಚಹಾ ಪಾತ್ರೆ
ರಷ್ಯಾ ಮತ್ತು ಭಾರತದಲ್ಲಿ ಚಹಾ ಸೇವನೆ ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿ ರಷ್ಯಾ ಮತ್ತು ಭಾರತದ ಸ್ನೇಹದ ಸಂಕೇತವಾಗಿ ಅಲಂಕೃತ ಬೆಳ್ಳಿ ಚಹಾ ಸೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಕೀರ್ಣವಾದ ಕೆತ್ತನೆಗಳಿಂದ ರಚಿಸಲಾದ ಅಲಂಕೃತವದ ಮುರ್ಷಿದಾಬಾದ್ ಬೆಳ್ಳಿ ಚಹಾ ಸೆಟ್ ಅನ್ನು ನೀಡಲಾಗಿದೆ. ಇದರಲ್ಲಿ ಪಶ್ಚಿಮ ಬಂಗಾಳದ ಶ್ರೀಮಂತ ಕಲಾತ್ಮಕತೆಯನ್ನು ಕಾಣಬಹುದು.
ಬೆಳ್ಳಿ ಕುದುರೆ ಕಲಾಕೃತಿ
ಭಾರತ ಮತ್ತು ರಷ್ಯಾದ ಸಂಸ್ಕೃತಿ, ಶೌರ್ಯ ಮತ್ತು ಘನತೆಯ ಪ್ರತಿಬಿಂಬವಾಗಿ ಕೈಯಲ್ಲಿ ಕೆತ್ತನೆ ಮಾಡಿದ ಬೆಳ್ಳಿ ಕುದುರೆಯ ಕಲಾಕೃತಿಯನ್ನು ಪುಟಿನ್‌ಗೆ ಉಡುಗೊರೆಯಾಗಿ ನೀಡಲಾಗಿದೆ. ಮಹಾರಾಷ್ಟ್ರದ ಕರಕುಶಲವನ್ನು ಇದರಲ್ಲಿ ಕಾಣಬಹುದು. ಇದು ಭಾರತದ ಲೋಹದ ಕರಕುಶಲ ಸಂಪ್ರದಾಯಗಳ ಕೈಚಳಕವನ್ನು ಪ್ರದರ್ಶಿಸುತ್ತದೆ.
ಅಮೃತಶಿಲೆಯ ಚೆಸ್ ಸೆಟ್
ಪುಟಿನ್ ಅವರಿಗೆ ಅಮೃತಶಿಲೆ ಚೆಸ್ ಸೆಟ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ. ಆಗ್ರಾದ ಈ ಕರಕುಶಲ ಅಮೃತಶಿಲೆಯ ಚೆಸ್ ಸೆಟ್ ವಿಭಿನ್ನ ಸೊಬಗಿನಿಂದ ಕೂಡಿದೆ. ಅಮೃತಶಿಲೆ, ಮರ ಮತ್ತು ಅಮೂಲ್ಯ ಕಲ್ಲುಗಳನ್ನು ಚೆಸ್ ಸೆಟ್‌ನಲ್ಲಿ ಬಳಸಲಾಗಿದೆ.
ಕಾಶ್ಮೀರದ ಕೇಸರಿ
ಬಣ್ಣ, ರುಚಿ ಮತ್ತು ಸಂಸ್ಕೃತಿಯ ಪರಂಪರೆಯನ್ನು ಒಳಗೊಂಡಿರುವ ಕಾಶ್ಮೀರಿ ಕೇಸರಿಯನ್ನು ಪುಟಿನ್‌ಗೆ ಉಡುಗೊರೆಯಾಗಿ ನೀಡಲಾಗಿದೆ. ‘ಕೆಂಪು ಚಿನ್ನ’ ಎಂದು ಕರೆಯುವ ಕಾಶ್ಮೀರಿ ಕೇಸರಿಗೆ ಜಿಐ ಟ್ಯಾಗ್ ಮಾನ್ಯತೆಯೂ ದೊರಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.