ADVERTISEMENT

ಮೋದಿ ಹ್ಯಾಕ್‌ ಮಾಡಿದ್ದು EVMಗಳನ್ನಲ್ಲ, ಜನರ ಹೃದಯಗಳನ್ನು: ಕಂಗನಾ ರನೌತ್‌

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 13:28 IST
Last Updated 10 ಡಿಸೆಂಬರ್ 2025, 13:28 IST
ಕಂಗನಾ ರನೌತ್‌
ಕಂಗನಾ ರನೌತ್‌   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆಗಳಲ್ಲಿ ಗೆಲ್ಲಲು ಮತಗಳ್ಳತನದಲ್ಲಿ ತೊಡಗಿದ್ದಾರೆ ಎಂಬ ವಿರೋಧ ಪಕ್ಷಗಳ ಆರೋಪಗಳಿಗೆ ಬಿಜೆಪಿ ಸಂಸದೆ ಕಂಗನಾ ರನೌತ್‌ ತಿರುಗೇಟು ನೀಡಿದ್ದಾರೆ.

ಲೋಕಸಭೆಯಲ್ಲಿ ಚುನಾವಣೆಗಳ ಕುರಿತು ನಡೆಸಿದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಜನರ ಹೃದಯಗಳನ್ನು ಕದ್ದಿದ್ದಾರೆ ಹೊರತು ಚುನಾವಣೆಗಳಲ್ಲಿ ಮತಗಳನ್ನಲ್ಲ. ಮೋದಿ ಜನರ ಮನಸ್ಸಿನಲ್ಲಿದ್ದಾರೆ ಹೀಗಾಗಿ ಅವರು ಮತಗಳನ್ನು ಕದಿಯುವ ಅವಶ್ಯಕತೆಯೇ ಇಲ್ಲ ಎಂದು ವಿರೋಧ ಪಕ್ಷಗಳಿಗೆ ಕುಟುಕಿದ್ದಾರೆ.

ಸದನದಲ್ಲಿ ಚರ್ಚೆ ನಡೆಸಲು ವಿರೋಧ ಪಕ್ಷಗಳು ಅಡ್ಡಿಪಡಿಸುತ್ತಿವೆ. ಆದರೆ, ವಾಸ್ತವವಾಗಿ ಚುನಾವಣೆಗಳಲ್ಲಿ ಬಿಜೆಪಿ ಗೆಲುವನ್ನು ಸಹಿಸಲು ಆಗದೇ, ತಮಗಾದ ಸೋಲನ್ನು ಒಪ್ಪಿಕೊಳ್ಳದೇ ವಿರೋಧ ಪಕ್ಷಗಳು ಅತಂತ್ರ ಸ್ಥಿತಿಯಲ್ಲಿವೆ ಎಂದು ವ್ಯಂಗ್ಯವಾಡಿದ್ದಾರೆ.

ADVERTISEMENT

ವಿರೋಧ ಪಕ್ಷಗಳು ಮಹಿಳೆಯರನ್ನು ಅವಮಾನಿಸುತ್ತ ಬಂದಿವೆ. ಆದರೆ, ಮೋದಿ ಸರ್ಕಾರ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ.

ಸರ್ಕಾರ ’ಭೂತಕಾಲವನ್ನು’ ಬಿಟ್ಟುಬಿಡಬೇಕು ಎಂಬ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಗೆ ತಿರುಗೇಟು ನೀಡಿರುವ ರನೌತ್‌, ಕಾಂಗ್ರೆಸ್ ತನ್ನದೇ ಆದ ಇತಿಹಾಸದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾರತೀಯ ಪೌರತ್ವ ಪಡೆಯುವ ಮುನ್ನವೇ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.