
ಲೋಕಸಭೆ
ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಇತಿಹಾಸವನ್ನು ಪುನಃ ಬರೆಯಲು ಪ್ರಯತ್ನಿಸುತ್ತಿದ್ದು, ‘ವಂದೇ ಮಾತರಂ’ ಚರ್ಚೆಗೆ ರಾಜಕೀಯ ಬಣ್ಣ ನೀಡಿದ್ದಾರೆ. ಬಿಜೆಪಿಗರು ಎಷ್ಟೇ ಪ್ರಯತ್ನಿಸಿದರೂ ಜವಾಹರಲಾಲ್ ನೆಹರೂ ಅವರ ಕೊಡುಗೆಯನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ’ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಲೋಕಸಭೆಯಲ್ಲಿ ‘ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವ ಕುರಿತಂತೆ ಮೋದಿ ಅವರು ಭಾಷಣದ ವೇಳೆ ಮಾಡಿದ ಆರೋಪಗಳನ್ನು ಆಧರಿಸಿ ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ತಿರುಗೇಟು ನೀಡಿದ್ದಾರೆ.
‘ವಂದೇ ಮಾತರಂ’ ಗೀತೆಗೆ ಅರ್ಹವಾದ ಪ್ರಾಮುಖ್ಯತೆ ಮತ್ತು ರಾಷ್ಟ್ರೀಯ ಗೀತೆಯ ಸ್ಥಾನಮಾನವನ್ನು ನೀಡಿದ್ದು ಕಾಂಗ್ರೆಸ್ ಪಕ್ಷವೇ ಹೊರತು ಬಿಜೆಪಿಯಲ್ಲ. ಯಾವುದೇ ವಿಷಯದ ಬಗ್ಗೆ ಮಾತನಾಡುವಾಗ ಭಾರತದ ಮೊದಲ ಪ್ರಧಾನಿ ನೆಹರೂ ಮತ್ತು ಕಾಂಗ್ರೆಸ್ ಅನ್ನು ಗುರಿಯಾಗಿಸುವುದು ಮೋದಿ ಅವರಿಗೆ ಅಭ್ಯಾಸವಾಗಿದೆ ಎಂದು ಗೊಗೊಯ್ ಗುಡುಗಿದ್ದಾರೆ.
‘ಪಾಕ್ ವಿರುದ್ಧದ ‘ಆಪರೇಷನ್ ಸಿಂಧೂರ’ ಕುರಿತಾದ ಚರ್ಚೆಯ ವೇಳೆ ಮೋದಿ ಅವರು ನೆಹರೂ ಅವರ ಹೆಸರನ್ನು 14 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 50 ಬಾರಿ ಉಲ್ಲೇಖಿಸಿದ್ದರು. ಸಂವಿಧಾನದ 75ನೇ ವಾರ್ಷಿಕೋತ್ಸವದ ಕುರಿತು ಚರ್ಚೆ ನಡೆದಾಗ ನೆಹರೂ ಅವರ ಹೆಸರನ್ನು 10 ಬಾರಿ ಮತ್ತು ಕಾಂಗ್ರೆಸ್ ಹೆಸರನ್ನು 26 ಬಾರಿ ಪ್ರಸ್ತಾಪಿಸಿದ್ದರು’ ಎಂದು ಗೊಗೊಯ್ ಕುಟುಕಿದ್ದಾರೆ.
‘2022ರಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮೋದಿ ಅವರು, ನೆಹರೂ ಹೆಸರನ್ನು 15 ಬಾರಿ ಉಲ್ಲೇಖಿಸಿದ್ದರು. 2020ರಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ವೇಳೆ ನೆಹರೂ ಹೆಸರನ್ನು 20 ಬಾರಿ ಪ್ರಸ್ತಾಪಿಸಿದ್ದರು. ನರೇಂದ್ರ ಮೋದಿ ಜಿ ಮತ್ತು ಅವರ ಇಡೀ ವ್ಯವಸ್ಥೆಗೆ ನಾನು ಅತ್ಯಂತ ನಮ್ರತೆಯಿಂದ ಹೇಳಲು ಬಯಸುತ್ತೇನೆ... ನೀವು ಎಷ್ಟೇ ಪ್ರಯತ್ನಿಸಿದರೂ ನೆಹರೂ ಅವರ ಕೊಡುಗೆಗಳನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ’ ಎಂದು ಗೊಗೊಯ್ ವಾಗ್ದಾಳಿ ನಡೆಸಿದ್ದಾರೆ.
1896ರ ಕೋಲ್ಕತ್ತ ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ‘ವಂದೇ ಮಾತರಂ’ ಹಾಡಿದ್ದರು. 1905ರ ಬನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ ಸರಳಾ ದೇವಿ ಅವರು ‘ವಂದೇ ಮಾತರಂ’ ಹಾಡಿದ್ದರು ಎಂದು ಗೊಗೊಯ್ ಸ್ಮರಿಸಿದ್ದಾರೆ.
‘ವಂದೇ ಮಾತರಂ ಗೀತೆಯಲ್ಲಿ ಜನಸಂಖ್ಯೆಗೆ ಸಂಬಂಧಿಸಿದ ಒಂದು ಪ್ರಮುಖ ತಿದ್ದುಪಡಿಯನ್ನು ಮಾಡಲಾಯಿತು. ಮೂಲ ಹಾಡಿನಲ್ಲಿ 7 ಕೋಟಿ ಎಂದು ಉಲ್ಲೇಖಿಸಲಾಗಿತ್ತು. ಆದರೆ, 1905ರ ಬನಾರಸ್ ಅಧಿವೇಶನದಲ್ಲಿ ಸರಳಾ ದೇವಿ ಅದನ್ನು 30 ಕೋಟಿ ಎಂದು ಹೇಳುವ ಮೂಲಕ ಇಡೀ ದೇಶದ ಗಮನವನ್ನು ಹಾಡಿನ ಕಡೆಗೆ ತಿರುಗಿಸಿದ್ದರು’ ಎಂದು ಅವರು ವಿವರಿಸಿದ್ದಾರೆ.
ಸಾಮಾಜಿಕ ಸಾಮರಸ್ಯದ ನೆಪದಲ್ಲಿ ಕಾಂಗ್ರೆಸ್, ‘ವಂದೇ ಮಾತರಂ’ ಗೀತೆಯನ್ನು ತುಂಡು ತುಂಡಾಗಿ ಒಡೆದು ಹಾಕಿದ್ದಲ್ಲದೆ ಈಗಲೂ ಓಲೈಕೆ ರಾಜಕಾರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮುಸ್ಲಿಮರ ಭಾವನೆಗಳಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಗೀತೆಯನ್ನು ವಿರೋಧಿಸಿದ್ದರು ಎಂದು ಮೋದಿ ಆರೋಪಿಸಿದ್ದಾರೆ. ‘ವಂದೇ ಮಾತರಂ’ ಗೀತೆಯ ಕೆಲ ಪ್ರಮುಖ ಸಾಲುಗಳನ್ನು 1937ರಲ್ಲಿ ಕಾಂಗ್ರೆಸ್ ಕೈಬಿಟ್ಟಿದೆ. ಇದು ದೇಶ ವಿಭಜನೆಯ ಬೀಜ ಬಿತ್ತಲು ಕಾರಣವಾಯಿತು ಎಂದೂ ಮೋದಿ ದೂರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.