ADVERTISEMENT

ಮೋದಿ-ಟ್ರಂಪ್ ಉತ್ತಮ ಸ್ನೇಹಿತರಾದರೇ ಭಾರತೀಯರ ಕೈಗಳಿಗೆ ಕೋಳವೇಕೆ?: ಪ್ರಿಯಾಂಕಾ

ಪಿಟಿಐ
Published 6 ಫೆಬ್ರುವರಿ 2025, 10:26 IST
Last Updated 6 ಫೆಬ್ರುವರಿ 2025, 10:26 IST
<div class="paragraphs"><p>ಪ್ರಿಯಾಂಕಾ ಗಾಂಧಿ ಮತ್ತು ಪ್ರಧಾನಿ ಮೋದಿ </p></div>

ಪ್ರಿಯಾಂಕಾ ಗಾಂಧಿ ಮತ್ತು ಪ್ರಧಾನಿ ಮೋದಿ

   

ನವದೆಹಲಿ: ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಭಾರತೀಯರನ್ನು ಗಡೀಪಾರು ಮಾಡಿದ ರೀತಿಯನ್ನು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಉತ್ತರಿಸಬೇಕು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಮೆರಿಕದಲ್ಲಿ ಅಕ್ರಮವಾಗಿ ನೆಲಸಿದ್ದ ಭಾರತೀಯರನ್ನು ವಾಪಸು ಕಳುಹಿಸುವ ಪ್ರಕ್ರಿಯೆಯ ಮೊದಲ ಹಂತವಾಗಿ 104 ಭಾರತೀಯರನ್ನು ಹೊತ್ತ ಅಮೆರಿಕ ಸೇನಾ ವಿಮಾನವು ಬುಧವಾರ ಮಧ್ಯಾಹ್ನ ಪಂಜಾಬ್‌ನ ಅಮೃತಸರದ ಶ್ರೀ ಗುರು ರಾಮ್‌ದಾಸ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿತ್ತು.

ADVERTISEMENT

ಗಡೀಪಾರು ಮಾಡಿದ ಭಾರತೀಯರ ಕೈಗಳಿಗೆ ಬೇಡಿ ತೊಡಿಸಲಾಗಿತ್ತು. ಕಾಲುಗಳಿಗೆ ಸಂಕೋಲೆ ಹಾಕಲಾಗಿತ್ತು. ಪ್ರಯಾಣದುದ್ದಕ್ಕೂ ಹೀಗೆ ಇರಿಸಲಾಗಿತ್ತು. ಅಮೃತಸರ ವಿಮಾನನಿಲ್ದಾಣಕ್ಕೆ ಬಂದಿಳಿದ ಬಳಿಕವೇ ಬೇಡಿಗಳನ್ನು ತೆಗೆಯಲಾಯಿತು ಎಂದು ಗಡೀಪಾರದವರಲ್ಲಿ ಓರ್ವರಾದ ಪಂಜಾಬ್‌ನ ಜಸ್‌ಪಾಲ್ ಸಿಂಗ್ ತಮ್ಮ ಅನುಭವ ಬಿಚ್ಚಿಟ್ಟಿದ್ದರು.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ‘ಮೋದಿ ಜಿ ಮತ್ತು ಟ್ರಂಪ್ ಜಿ ತುಂಬಾ ಒಳ್ಳೆಯ ಸ್ನೇಹಿತರು ಎಂದು ಬಹಳಷ್ಟು ಸಂಗತಿಗಳನ್ನು ಹೇಳಲಾಗಿದೆ. ಆದರೆ, ಭಾರತೀಯರ ಕೈಗಳಿಗೆ ಬೇಡಿ ಮತ್ತು ಕಾಲುಗಳಿಗೆ ಸಂಕೋಲೆಗಳನ್ನು ಹಾಕಿ ಗಡೀಪಾರು ಮಾಡಲು ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಏಕೆ ಅವಕಾಶ ನೀಡಿದರು’ ಎಂದು ಪ್ರಶ್ನಿಸಿದ್ದಾರೆ.

ಭಾರತೀಯರಿಗೆ ಆದ ಈ ಅವಮಾನಕರ ಘಟನೆ ಬಗ್ಗೆ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಕೂಡಲೇ ಉತ್ತರಿಸಬೇಕು ಎಂದು ಪ್ರಿಯಾಂಕಾ ಆಗ್ರಹಿಸಿದ್ದಾರೆ.

‘ಭಾರತೀಯರ ಕೈಗಳಿಗೆ ಕೋಳ ತೊಡಿಸಿರುವ ಚಿತ್ರವು ಬೇಸರ ತರಿಸಿದೆ. ಅವರಿಗೆ ಅವಮಾನ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಹೇಳಿದೆ. ‘2013ರಲ್ಲಿ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರನ್ನು ಅಮೆರಿಕವು ಹೀಗೆಯೇ ಅವಮಾನಿಸಿತ್ತು. ಆ ವೇಳೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಅಮೆರಿಕದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿತ್ತು’ ಎಂದು ಕಾಂಗ್ರೆಸ್‌ ನೆನಪು ಮಾಡಿಕೊಂಡಿದೆ.

ಕಾಂಗ್ರೆಸ್‌ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು ಬುಧವಾರ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದರು. ‘ಅಮೆರಿಕದ ಅಧಿಕಾರಿಗಳು ದೇವಯಾನಿ ಅವರಿಗೆ ಕೋಳ ತೊಡಿಸಿ, ಅವರ ಬಟ್ಟೆ ಕಳಚಿ ತಪಾಸಣೆ ನಡೆಸಿದ್ದರು. ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಸುಜಾತ ಸಿಂಗ್‌ ಪ್ರತಿಭಟನೆ ದಾಖಲಿಸಿದ್ದರು’ ಎಂದು ನೆನಪು ಮಾಡಿಕೊಂಡಿದ್ದರು.

‘ಅಮೆರಿಕದ ಈ ಕ್ರಮವನ್ನು ಖಂಡಿಸಿ, ಅಮೆರಿಕದ ಸಂಸತ್ತಿನ ನಿಯೋಗವನ್ನು ಭೇಟಿ ಮಾಡಲು ಮೀರಾ ಕುಮಾರ್‌, ಸುಶೀಲ್‌ ಕುಮಾರ್ ಶಿಂದೆ, ರಾಹುಲ್ ಗಾಂಧಿ ಅವರು ನಿರಾಕರಿಸಿದ್ದರು. ಅಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರು ಈ ಕ್ರಮವನ್ನು ‘ಶೋಚನೀಯ’ ಎಂದಿದ್ದರು’ ಎಂದು ತಿಳಿಸಿದ್ದರು.

‘ಅಮೆರಿಕದ ರಾಯಭಾರಿಗಳಿಗೆ ನೀಡುತ್ತಿದ್ದ ಹಲವು ವಿಶೇಷ ಸವಲತ್ತುಗಳನ್ನೂ ತಡೆಹಿಡಿಯಲಾಗಿತ್ತು. ‘ಅಮೆರಿಕನ್‌ ಎಂಬಸಿ ಸ್ಕೂಲ್‌’ ಮೇಲೆ ಐಟಿ ದಾಳಿ ಮಾಡಲಾಗಿತ್ತು. ಈ ಎಲ್ಲದ ಬಳಿಕ ದೇವಯಾನಿಯವರನ್ನು ನಡೆಸಿಕೊಂಡ ಬಗ್ಗೆ ಅಮೆರಿಕವು ಖೇದ ವ್ಯಕ್ತಪಡಿಸಿತು’ ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.