ತ್ರಿಪುರಾದ ಅಗರ್ತಲಾ ಜಿಲ್ಲೆಯಲ್ಲಿರುವ ತ್ರಿಪುರೇಶ್ವರಿ ದೇವಾಲಯ
ಎಕ್ಸ್ ಚಿತ್ರ
ಅಗರ್ತಲಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆ. 22) ತ್ರಿಪುರಾ ರಾಜ್ಯ ಪ್ರವಾಸ ಕೈಗೊಂಡಿದ್ದು, ಗೋಮತಿ ಜಿಲ್ಲೆಯಲ್ಲಿ ಜೀರ್ಣೋದ್ಧಾರಗೊಂಡಿರುವ ತ್ರಿಪುರೇಶ್ವರಿ ದೇಗಲವನ್ನು ಉದ್ಘಾಟಿಸಲಿದ್ದಾರೆ.
ದೇಶದಲ್ಲಿರುವ 51 ಶಕ್ತಿಪೀಠಗಳಲ್ಲಿ ತ್ರಿಪುರೇಶ್ವರಿ ದೇಗುಲವೂ ಒಂದು. ಮಹಾರಾಜ ಧನ್ಯ ಮಾಣಿಕ್ಯ 1501ರಲ್ಲಿ ಈ ದೇಗುಲ ನಿರ್ಮಿಸಿದ್ದರು. ತೀರ್ಥಕ್ಷೇತ್ರ ಪುನರುಜ್ಜೀವನ ಮತ್ತು ಅಧ್ಯಾತ್ಮ ವಿಸ್ತರಣಾ ಅಭಿಯಾನ (PRASAD) ಅಡಿಯಲ್ಲಿ ₹52 ಕೋಟಿ ವೆಚ್ಚದಲ್ಲಿ ಈ ದೇಗುಲ ಜೀರ್ಣೋದ್ಧಾರಗೊಂಡಿದೆ.
ದೇಗುಲ ಉದ್ಘಾಟನೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು ಅಗರ್ತಲಾ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಮೂಲಕ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಸೋಮವಾರ ಮಧ್ಯಾಹ್ನ 3ಕ್ಕೆ ದೇವಾಲಯ ಉದ್ಘಾಟಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಉದ್ಘಾಟನಾ ಕಾರ್ಯಕ್ರಮ ಸುಮಾರು 45 ನಿಮಿಷಗಳ ಕಾಲ ನಡೆಯಲಿದೆ. ನಂತರ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ. ಮುಖ್ಯಮಂತ್ರಿ ಮಾಣಿಕ್ ಸಾಹಾ ಹಾಗೂ ಸಂಪುಟದ ಸಚಿವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಜಿಲ್ಲಾಧಿಕಾರಿ ರಿಂಕು ಲಾಥರ್ ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ರಾಜ್ಯಕ್ಕೆ ಇದು 11ನೇ ಭೇಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.