
ಆರ್ಎಸ್ಎಸ್ ಶತಮಾನೋತ್ಸವ ವರ್ಷದ ಅಂಗವಾಗಿ ಮುಂಬೈನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಸಂಘಟನೆ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಿದರು
ಪಿಟಿಐ ಚಿತ್ರ
ಮುಂಬೈ: ‘ದೇಶದ ಎಲ್ಲ ಭಾಗೀದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಏಕರೂಪ ನಾಗರಿಕ ಸಂಹಿತೆ(ಯುಸಿಸಿ) ರೂಪಿಸಬೇಕು. ಹಾಗೆಯೇ, ಯುಸಿಸಿ ಜನರಲ್ಲಿ ಒಡಕು ಮೂಡಿಸುವಂತಿರಬಾರದು’ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಶತಮಾನೋತ್ಸವದ ಅಂಗವಾಗಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಉತ್ತರಾಖಂಡದಲ್ಲಿ ಯುಸಿಸಿ ಕುರಿತಂತೆ ಮೂರು ಲಕ್ಷ ಸಲಹೆ–ಸೂಚನೆಗಳು ಬಂದಿದ್ದವು. ಅವುಗಳ ಕೂಲಂಕಷ ಪರಿಶೀಲನೆ ನಂತರ, ಯುಸಿಸಿ ರೂಪಿಸಿ, ಜಾರಿಗೊಳಿಸಲಾಗಿದೆ’ ಎಂದರು.
‘ಸಂಘದ ನೇತೃತ್ವ ವಹಿಸುವ ವ್ಯಕ್ತಿಯು ಯಾವುದೇ ಜಾತಿಗೆ ಸೇರಿರಲಿ, ಆತ ಯಾವಾಗಲೂ ಹಿಂದೂ ಆಗಿರುತ್ತಾನೆ. ಸಂಘದ ಈ ಅತ್ಯುನ್ನತ ಹುದ್ದೆಗೆ ಅರ್ಹರನ್ನೇ ಆಯ್ಕೆ ಮಾಡಲಾಗುತ್ತದೆಯಷ್ಟೆ’ ಎಂದು ಹೇಳಿದರು.
‘ಸಂಘದ ಮುಖ್ಯಸ್ಥರನ್ನಾಗಿ ಎಸ್ಸಿ, ಎಸ್ಟಿ ಸಮುದಾಯಕ್ಕೆ ಸೇರಿದವರನ್ನು ನೇಮಕ ಮಾಡಲಾಗುತ್ತದೆಯೇ’ ಎಂಬ ಪ್ರಶ್ನೆಗೆ ನೇರವಾಗಿ ಉತ್ತರ ನೀಡದ ಭಾಗವತ್, ‘ವಿಭಾಗೀಯ ಮತ್ತು ಪ್ರಾದೇಶಿಕ ಮುಖಂಡರು ಚರ್ಚಿಸಿ, ಮುಖ್ಯಸ್ಥರನ್ನು ಆಯ್ಕೆ ಮಾಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.
ಚಿತ್ರ ನಟಿಯರಾದ ರವೀನಾ ಟಂಡನ್, ಅನನ್ಯಾ ಪಾಂಡೆ, ನಟ ವಿಕಿ ಕೌಶಲ್, ನಿರ್ದೇಶಕರಾದ ಕರಣ್ ಜೋಹರ್, ಮಧುರ್ ಭಂಡಾರ್ಕರ್, ರಮೇಶ್ ತೌರಾನಿ, ಸಂಗೀತಗಾರ ಪಂಡಿತ ಹೃದಯನಾಥ ಮಂಗೇಶ್ಕರ್ ಹಾಗೂ ಇತರರು ಪಾಲ್ಗೊಂಡಿದ್ದರು.
ನನಗೆ ವಯಸ್ಸಾಗಿದ್ದರೂ ಸಂಘದ ಸೂಚನೆಯಂತೆ ಸಂಘಟನೆಯನ್ನು ಮುನ್ನಡೆಸುತ್ತಿರುವೆ. ಒಂದು ವೇಳೆ ಸಂಘವು ಸೂಚಿಸಿದಲ್ಲಿ ನಾನು ಈ ಹುದ್ದೆ ತ್ಯಜಿಸಲು ಸಿದ್ಧಮೋಹನ್ ಭಾಗವತ್, ಆರ್ಎಸ್ಎಸ್ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.