
ನವದೆಹಲಿ: ಉಗ್ರರಿಗೆ ಹಣಕಾಸು ನೆರವು ನೀಡಿರುವುದಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಲ್ ಫಲಾಹ್ ಗ್ರೂಪ್‌ನ ಅಧ್ಯಕ್ಷ ಜಾವದ್ ಅಹ್ಮದ್ ಸಿದ್ದಿಕಿ ಅವರನ್ನು ದೆಹಲಿ ನ್ಯಾಯಾಲಯವು 13 ದಿನಗಳ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ಕಸ್ಟಡಿಗೆ ನೀಡಿದೆ.
ಸಿದ್ದಿಕಿ ಅವರನ್ನು ಮಂಗಳವಾರ ಮಧ್ಯರಾತ್ರಿ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶೀತಲ್ ಚೌಧರಿ ಪ್ರಧಾನ್ ಅವರ ನಿವಾಸದಲ್ಲಿ ಹಾಜರುಪಡಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸಿದ್ದಿಕಿ ಬಂಧನ ವೇಳೆ ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯ ಸೆಕ್ಷನ್ 19ರ ಅಡಿಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಅಪರಾಧದ ಗಂಭೀರತೆ ಮತ್ತು ತನಿಖೆಯು ಆರಂಭಿಕ ಹಂತದಲ್ಲಿದೆ ಎಂಬುದನ್ನು ಆಧರಿಸಿ ಆರೋಪಿಯನ್ನು 13 ದಿನಗಳ ಕಾಲ ಇ.ಡಿ ಕಸ್ಟಡಿಗೆ ನೀಡಲಾಗಿದೆ’ ಎಂದು ಶೀತಲ್ ಚೌಧರಿ ಹೇಳಿದ್ದಾರೆ.
ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಕುರಿತ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು, ಅಲ್ ಫಲಾಹ್ ವಿಶ್ವವಿದ್ಯಾಲಯ ಟ್ರಸ್ಟಿಗಳು ಹಾಗೂ ಪ್ರವರ್ತಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದ್ದರು.
ಸುದೀರ್ಘ ಶೋಧ ನಡೆಸಿದ ಬಳಿಕ ಇ.ಡಿ ಅಧಿಕಾರಿಗಳು ಸಿದ್ದಿಕಿ ಅವರನ್ನು ಬಂಧಿಸಿದ್ದರು. ಇದೇ ವೇಳೆ, ₹48 ಲಕ್ಷ ನಗದು ವಶಪಡಿಸಿಕೊಂಡಿದ್ದರು.
ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡು 15 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆಯ ಹಲವು ತಂಡಗಳು ಸಂಚುಕೋರರ ಬಂಧನಕ್ಕಾಗಿ ಹಲವು ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ.
ಅಲ್ ಫಲಾಹ್ ಗ್ರೂಪ್‌ನ ಅಧ್ಯಕ್ಷ ಜಾವದ್ ಅಹ್ಮದ್ ಸಿದ್ದಿಕಿ ಅವರ ಆಪ್ತರು ಗಲ್ಫ್‌ನಲ್ಲಿ ನೆಲೆಸಿರುವುದರಿಂದ ಭಾರತವನ್ನು ತೊರೆಯಲು ಸಿದ್ಧತೆ ನಡೆಸಿದ್ದರು. ಜತೆಗೆ, ಸಿದ್ದಿಕಿ ಒಡೆತನದ ಶಿಕ್ಷಣ ಸಂಸ್ಥೆಗಳು ₹415 ಕೋಟಿ ವಂಚಿಸಿರುವುದು ದೃಢಪಟ್ಟಿದೆ ಎಂದು ಇ.ಡಿ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.