ADVERTISEMENT

ಸುಪ್ರೀಂ ಆದೇಶ ’ನೈತಿಕ ಗೆಲುವು’– ಮಮತಾ, ’ಸಿಬಿಐನ ನೈತಿಕ ಗೆಲುವು’–ಕೇಂದ್ರ

ರಾಜೀವ್ ಕುಮಾರ್ ವಿಚಾರಣೆಗೆ ಹಾಜರಾಗಲಿ

ಏಜೆನ್ಸೀಸ್
Published 5 ಫೆಬ್ರುವರಿ 2019, 10:27 IST
Last Updated 5 ಫೆಬ್ರುವರಿ 2019, 10:27 IST
   

ಕೋಲ್ಕತ್ತ/ನವದೆಹಲಿ:ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆಗೊಳಪಡಿಸಬಹುದು ಆದರೆ ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ’ನೈತಿಕ ಗೆಲುವು’ ಎಂದು ಮಮತಾ ಬ್ಯಾನರ್ಜಿ ಹೇಳಿಕೊಂಡರೆ, ಕೇಂದ್ರ ಸರ್ಕಾರವೂ ಸಹ ಇದು ಸಿಬಿಐಗೆ ದೊರೆತ ನೈತಿಕ ಗೆಲುವು ಎಂದಿದೆ.

ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿ ಮಮತಾ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದ ವಿಚಾರಣೆಗೆ ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸಿಬಿಐ ಜತೆ ಸಹಕರಿಸಬೇಕೆಂದೂ ಮಂಗಳವಾರ ಸುಪ್ರೀಂಕೋರ್ಟ್ ಆದೇಶಿಸಿದೆ. ಇದು ’ಸಿಬಿಐನ ನೈತಿಕ ಗೆಲುವು’ ಎಂದು ಹೇಳಿಕೊಂಡಿದೆ. ಫೆ.20ರಂದು ಮೇಘಾಲಯದ ಶಿಲ್ಲಾಂಗ್‌ನಲ್ಲಿರುವ ತನಿಖಾ ಸಂಸ್ಥೆಗೆ ರಾಜೀವ್‌ ಕುಮಾರ್‌ ಹಾಜರಾಗಬೇಕಿದೆ.

ಬೆಂಗಾಲದ ಶಾರದಾ ಚಿಟ್ ಫಂಡ್‌ ಹಗರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಲ್ಲಿಸಬೇಕು ಹಾಗೂ ತನಿಖೆಯಲ್ಲಿ ರಾಜೀವ್‌ ಕುಮಾರ್‌ ಸಹಕರಿಸಬೇಕಿದೆ. ಭಾನುವಾರ ಸಿಬಿಐ ರಾಜೀವ್‌ ಅವರನ್ನು ಬಂಧಿಸಲು ಬಂದ ನಂತರದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಮಮತಾ ಬ್ಯಾನರ್ಜಿ ನಡುವೆ ಜಟಾಪಟಿ ತಾರಕ್ಕೇರಿತು. ಸಿಬಿಐ ಅಧಿಕಾರಿಗಳ ತಂಡವನ್ನು ಕೋಲ್ಕತ್ತ ಪೊಲೀಸರು ಕೆಲವು ಗಂಟೆಗಳ ವರೆಗೂ ವಶಕ್ಕೆ ಪಡೆದಿದ್ದರು.

ADVERTISEMENT

* ’ಪ್ರಜೆಗಳು ಮಾತ್ರವೇ ಈ ದೇಶದ ದೊರೆ, ಬೇರೆ ಯಾರೂ ಅಲ್ಲ...ಪ್ರಜಾಪ್ರಭುತ್ವ ಮಾತ್ರವೇ ದೇಶದ ಒಡೆಯ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದು ಕೇವಲ ನನ್ನ ಗೆಲುವು ಅಲ್ಲ. ಸಂವಿಧಾನದ ಗೆಲುವು ಎಂದಿದ್ದಾರೆ.

*ಶಾರದಾ ಮತ್ತು ರೋಸ್‌ ವ್ಯಾಲಿ ಚಿಟ್ ಫಂಡ್‌ ಹಗರಣದ ತನಿಖೆ ನಡೆಸುತ್ತಿದ್ದ ವಿಶೇಷ ತನಿಖಾ ತಂಡದ ನೇತೃತ್ವವನ್ನು ರಾಜೀವ್ ಕುಮಾರ್‌ ವಹಿಸಿದ್ದರು. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ನ ಸದಸ್ಯರು ಹಗರಣದಲ್ಲಿ ಭಾಗಿಯಾಗಿದ್ದು, ಅವರನ್ನು ರಕ್ಷಿಸಿ ಸಾಕ್ಷ್ಯನಾಶ ಮಾಡಲಾಗಿದೆ ಎಂದು ಸಿಬಿಐ ಸುಪ್ರೀಂ ಕೋರ್ಟ್‌ಗೆ ಹೇಳಿದೆ.

* ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌, ಚಂದ್ರಬಾಬು ನಾಯ್ಡು, ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಬಿಎಸ್‌ಪಿಯ ಮಾಯಾವತಿ ಹಾಗೂ ಆರ್‌ಜೆಡಿಯ ತೇಜಸ್ವಿ ಯಾದವ್‌ ಸೇರಿ ಬಿಜೆಪಿಯ ವಿರೋಧ ಪಕ್ಷಗಳ ಹಲವು ಮುಖಂಡ ಮಮತಾ ಅವರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.