ADVERTISEMENT

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮತ್ತೆ ಭಿನ್ನಮತ: ಬಿಜೆಪಿಗೆ ಸೇರಲ್ಲ ಎಂದ ಪೈಲಟ್‌

ಪಿಟಿಐ
Published 12 ಜೂನ್ 2021, 2:27 IST
Last Updated 12 ಜೂನ್ 2021, 2:27 IST
ಸಚಿನ್ ಪೈಲಟ್
ಸಚಿನ್ ಪೈಲಟ್   

ಜೈಪುರ: ಕಾಂಗ್ರೆಸ್ ಶಾಸಕರ ಗುಂಪೊಂದು ಸಚಿನ್ ಪೈಲಟ್ ಅವರನ್ನು ಭೇಟಿಯಾದ ಒಂದು ದಿನದ ನಂತರ ರಾಜಸ್ಥಾನ ಆಡಳಿತ ಪಕ್ಷದಲ್ಲಿ ಮತ್ತೆ ಅಸಮಾಧಾನ ಹೊಗೆಯಾಡಲಾರಂಭಿಸಿದೆ.

ಈ ಮಧ್ಯೆ ಜಿತಿನ್ ಪ್ರಸಾದ ರೀತಿಯೇ ತಾನೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎಂಬ ವದಂತಿಗಳನ್ನು ಸಚಿನ್ ಪೈಲಟ್ ತಳ್ಳಿ ಹಾಕಿದ್ದಾರೆ.

ಕಳೆದ ವರ್ಷ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಂಡಾಯ ಬಣವನ್ನು ಮುನ್ನಡೆಸಿದ್ದ ಶಾಸಕ ಪಿ.ಆರ್. ಮೀನ ಅವರು ಹೇಳಿಕೆ ನೀಡಿ, ಪೈಲಟ್ ಅವರು ಎತ್ತಿದ ಸಮಸ್ಯೆಗಳನ್ನು ಪಕ್ಷದ ಹೈಕಮಾಂಡ್ ಆದಷ್ಟು ಬೇಗನೇ ಬಗೆಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಅಂದು ಗೆಹ್ಲೋಟ್ ಹಾಗೂ ಪೈಲಟ್ ನಡುವಣ ಭಿನ್ನಾಭಿಪ್ರಾಯಗಳನ್ನು ಶಾಂತಗೊಳಿಸಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ), ಇನ್ನೂ ಸಮಸ್ಯೆಗೆ ಪರಿಹಾರವನ್ನು ಹುಡುಕಿಲ್ಲ ಎಂಬುದು ಗಮನಾರ್ಹವೆನಿಸುತ್ತದೆ.

ಇತ್ತೀಚೆಗೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್ ಶಾಸಕ ಹೇಮರಾಮ್ ಚೌಧರಿ, ಪೈಲಟ್ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ಏತನ್ಮಧ್ಯೆ ಕಳೆದ ಬಾರಿ ಬಂಡಾಯ ಎದ್ದಿದ್ದಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಪೈಲಟ್ ಅವರು, ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕಿದರು.

ಟೆವಿಲಿಷನ್ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿ ರೀಟಾ ಬಹುಗುಣ ಜೋಶಿ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. 'ಸಚಿನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ರೀಟಾ ಹೇಳಿದ್ದಾರೆ. ಅವರು ಬಹುಶಃ ಸಚಿನ್ ತೆಂಡೂಲ್ಕರ್ ಜೊತೆ ಮಾತನಾಡಿರಬಹುದು. ನನ್ನೊಂದಿಗೆ ಮಾತನಾಡಲು ಆಕೆಗೆ ಧೈರ್ಯವಿಲ್ಲ' ಎಂದು ಜೈಪುರದಲ್ಲಿ ಇಂಧನ ಬೆಲೆ ಏರಿಕೆ ಸಂಬಂಧ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಬಳಿಕ ಸಚಿನ್ ಪೈಲಟ್ ಪ್ರತಿಕ್ರಿಯಿಸಿದ್ದಾರೆ.

ಪೈಲಟ್ ಆಪ್ತ ಮೀನ ಗೆಹ್ಲೋಟ್ ಸಹ ಸಂಪುಟವನ್ನು ವಿಸ್ತರಿಸಬೇಕೆಂದು ಬಯಸಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ಬೇಗನೇ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಬಯಸಿದ್ದಾರೆ.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.