ನೊಯ್ಡಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ 160ಕ್ಕೂ ಹೆಚ್ಚು ರೈತರ ಬಂಧನ
(ಪಿಟಿಐ ಚಿತ್ರ)
ನೊಯ್ಡಾ: ದಲಿತ್ ಪ್ರೇರಣ್ ಸ್ಥಲ್‌ನಲ್ಲಿ ಧರಣಿ ನಡೆಸುತ್ತಿದ್ದ 160 ರೈತರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಸೋಮವಾರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಹೊರಟಿದ್ದ ರೈತರನ್ನು ಪೊಲೀಸರು ಇಲ್ಲಿಯೇ ತಡೆದಿದ್ದರು. ಬಳಿಕ, ರೈತರು ಧರಣಿ ಆರಂಭಿಸಿದ್ದರು.
ಸರ್ಕಾರ ಸ್ವಾಧೀನಪಡಿಸಿಕೊಳ್ಳುವ ಜಮೀನುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉತ್ತರ ಪ್ರದೇಶದ ರೈತರು ‘ದೆಹಲಿ ಚೊಲೋ’ ಹೊರಟಿದ್ದರು. ‘ಏಳು ದಿನಗಳ ಒಳಗೆ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ರೈತರು ಸರ್ಕಾರಕ್ಕೆ ಸೋಮವಾರ ಗಡುವು ನೀಡಿದ್ದರು.
‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 170ರ ಅನ್ವಯ 160 ರೈತರನ್ನು ಬಂಧಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಶಿವ್‌ಹರಿ ಮೀನಾ ಮಾಹಿತಿ ನೀಡಿದರು. ‘ಮುಂದೆ ನಡೆಯಬಹುದಾದ ಅಪರಾಧಗಳನ್ನು ತಡೆಯಲು ಪೊಲೀಸರು ವ್ಯಕ್ತಿಯನ್ನು ಬಂಧಿಸಬಹುದು’ ಎಂದು ಸೆಕ್ಷನ್ 170 ಹೇಳುತ್ತದೆ.
‘ಭಾರತೀಯ ಕಿಸಾನ್ ಪರಿಷತ್’ ರೈತ ಸಂಘಟನೆಯ ಅಧ್ಯಕ್ಷ ಸುಖಬೀರ್ ಖಲೀಫಾ ಹಾಗೂ ಭಾರತೀಯ ಕಿಸಾನ್ ಯೂನಿಯನ್‌ನ (ಪಶ್ಚಿಮ ಉತ್ತರ ಪ್ರದೇಶ) ಅಧ್ಯಕ್ಷ ಪವನ್ ಕಟಾನಾ ಸೇರಿ ಹಲವು ರೈತ ಮಹಿಳೆಯರನ್ನೂ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನೊಯಿಡಾದ ಲುಕಸರ್ ಜೈಲಿಗೆ ಕೊಂಡೊಯ್ಯಲಾಗಿದೆ.
ಬಂಧನದಲ್ಲಿರುವ ಸುಖಬೀರ್ ಖಲೀಫಾ ಅವರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ‘ಬೇಡಿಕೆಗಳ ಈಡೇರಿಕೆಗಾಗಿ ನಮ್ಮ ಹೋರಾಟವು ಮುಂದುವರಿಯಲಿದೆ’ ಎಂದರು. ಧರಣಿ ನಡೆಸುತ್ತಿರುವ ರೈತರು ತಮ್ಮೊಂದಿಗೆ ಹಾಸಿಗೆ, ಹೊದಿಕೆ, ಅಡುಗೆ ಸಾಮಗ್ರಿಗಳು, ಪಾತ್ರೆಗಳನ್ನು ತಂದಿದ್ದಾರೆ.
ರೈತರ ಬಂಧನವನ್ನು ಖಂಡಿಸುತ್ತೇನೆ. ಈ ಬಗ್ಗೆ ಚರ್ಚಿಸಲು ಕೂಡಲೇ ಮುಜಾಪ್ಫರ್ ನಗರದಲ್ಲಿ ಪಂಚಾಯತ್ ಕರೆಯಲಾಗುವುದುನರೇಶ್ ಟಿಕಾಯತ್ ಭಾರತೀಯ ಕಿಸಾನ್ ಯೂನಿಯನ್‌ನ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.