ಅಯೋಧ್ಯೆಯ ರಾಮ ಮಂದಿರ
– ಪಿಟಿಐ ಚಿತ್ರ
ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರದಲ್ಲಿ 2024 ಜನವರಿ 22 ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ಬಳಿಕ ದೇಶ ವಿದೇಶಗಳಿಂದ ಭಕ್ತರ ದಂಡೇ ಹರಿದು ಬಂದಿದೆ. 5.5 ಕೋಟಿಗೂ ಅಧಿಕ ಮಂದಿ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶದ ಸರ್ಕಾರ ಶುಕ್ರವಾರ ತಿಳಿಸಿದೆ.
ಕೇವಲ ಜನಸಾಮಾನ್ಯರು ಮಾತ್ರವಲ್ಲದೆ, ಕೇಂದ್ರ ಸಚಿವರು, ವಿವಿಧ ರಾಜ್ಯಗಳು ರಾಜ್ಯಪಾಲರು, ಹಾಗೂ ಮುಖ್ಯಮಂತ್ರಿಗಳು, ಮನರಂಜನೆ, ಉದ್ಯಮ ಹಾಗೂ ಕ್ರೀಡಾ ವಲಯದ ಪ್ರಮುಖರು ಸೇರಿದಂತೆ ಸುಮಾರು 4.5 ಲಕ್ಷ ವಿಐಪಿಗಳು ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ.
ದರ್ಶನದ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಮತ್ತು ಅನುಕೂಲಕರವಾಗಿರುವುದನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಖಚಿತಪಡಿಸಿಕೊಂಡಿದ್ದಾರೆ. ಸಾಮಾನ್ಯ ಭಕ್ತರಾಗಲಿ ಅಥವಾ ಗಣ್ಯ ಅತಿಥಿಗಳಾಗಲಿ ಎಲ್ಲಾ ಸಂದರ್ಶಕರ ಭೇಟಿ ಸುಗಮವಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೈಭವೋಪೇತ ದೇಗುಲ ನಿರ್ಮಾಣ ಪೂರ್ಣಗೊಳ್ಳುವುದರೊಂದಿಗೆ ಅಯೋಧ್ಯೆಯು ಜಾಗತಿಕ ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿದೆ. ಬೇಡಿಕೆ ಹೆಚ್ಚಳವಾಗಿರುವುದರಿಂದ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಲು ಸರ್ಕಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವಾರು ಅಂತರರಾಷ್ಟ್ರೀಯ ಗಣ್ಯರು ಭಾಗಿಯಾಗಿದ್ದು, ನಗರದ ರೂಪಾಂತರಕ್ಕೆ ಮುನ್ನುಡಿ ಬರೆಯಿತು. ಆ ಬಳಿಕ ವಿಐಪಿಗಳ ಭೇಟಿ ಹೆಚ್ಚಾಗಿದ್ದು, ಹಲವು ಗವರ್ನರ್‌ಗಳು ತಮ್ಮ ಕುಟುಂಬದೊಂದಿಗೆ ಆಗಾಗ್ಗೆ ಭೇಟಿ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಹಾಗೂ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸೇರಿ ಪ್ರಮಖರು ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಇತ್ತೀಚೆಗೆ ನಟ ಗೋವಿಂದ, ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೂಡ ಪ್ರಾರ್ಥನೆ ಸಲ್ಲಿಸಿದ್ದರು.
ಈವರೆಗೆ 5.5 ಕೋಟಿಗೂ ಅಧಿಕ ಭಕ್ತಾಧಿಗಳು ರಾಮ ಮಂದಿರಕ್ಕೆ ಆಗಮಿಸಿದ್ದಾರೆ. ಈ ಪೈಕಿ ಹೆಚ್ಚಿನವರು ಯಾತ್ರಾರ್ಥಿಗಳು. ಭೇಟಿ ನೀಡುವವರ ಭದ್ರತೆ ಹಾಗೂ ಆರಾಮದಾಯಕ ಅನುಭವಕ್ಕೆ ಭದ್ರತಾ ಶಿಷ್ಠಾಚಾರ ಸೇರಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಮನ ಮೂರ್ತಿಯನ್ನು ಈಗ ಒಂದನೇ ಮಹಡಿಯಲ್ಲಿ ಇರಿಸಿರುವುದರಿಂದ ಮುಂದಿನ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಭಾಗೀಯ ಆಯುಕ್ತ ಗೌರವ್ ದಯಾಳ್ ತಿಳಿಸಿದ್ದಾರೆ.
ಇತ್ತೀಚೆಗೆ ಶತಕೋಟ್ಯಧಿಪತಿ ಇಲಾನ್ ಮಸ್ಕ್ ಅವರ ತಂದೆ ಎರಾಲ್ ಮಸ್ಕ್ ಹಾಗೂ ಸಹೋದರಿ ಅಯೋಧ್ಯೆಗೆ ಆಗಮಿಸಿ ಬಾಲರಾಮನಿಗೆ ಪೂಜೆ ಸಲ್ಲಿಸಿದ್ದರು. ಅದ್ಭುತ ಅನುಭವ ಎಂದು ಬಣ್ಣಸಿದ್ದರು.
ಹೆಚ್ಚುತ್ತಿರುವ ಜನಸಂದಣಿ ನಿಯಂತ್ರಣಕ್ಕೆ, ಎಲ್ಲರಿಗೂ ದರ್ಶನಕ್ಕೆ ಅವಕಾಶ ಸಿಗಲು ಅಧಿಕಾರಿಗಳು ಆನ್‌ಲೈನ್ ಪಾಸ್ ವ್ಯವಸ್ಥೆ ಆರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.