ADVERTISEMENT

ದೆಹಲಿಯ ಶೇ 56.13 ಜನರಲ್ಲಿ ಕೋವಿಡ್–19 ವಿರುದ್ಧದ ಪ್ರತಿಕಾಯ

ಪಿಟಿಐ
Published 2 ಫೆಬ್ರುವರಿ 2021, 13:35 IST
Last Updated 2 ಫೆಬ್ರುವರಿ 2021, 13:35 IST
ಸಾಂದರ್ಭಿಕ ಚಿತ್ರ – ಕೃಪೆ: ಎಎಫ್‌ಪಿ
ಸಾಂದರ್ಭಿಕ ಚಿತ್ರ – ಕೃಪೆ: ಎಎಫ್‌ಪಿ   

ನವದೆಹಲಿ: ರಾಷ್ಟ್ರ ರಾಜಧಾನಿಯ ಶೇ 56.13ರಷ್ಟು ಜನ ಕೋವಿಡ್–19 ವಿರುದ್ಧ ಪ್ರತಿಕಾಯಗಳನ್ನು (ಆ್ಯಂಟಿಬಾಡಿ) ಹೊಂದಿರುವುದು ಸೆರೋಲಾಜಿಕಲ್ ಸಮೀಕ್ಷೆಯಿಂದ ತಿಳಿದುಬಂದಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ.

ದೆಹಲಿಯು ‘ಹರ್ಡ್ ಇಮ್ಯೂನಿಟಿ’ಯತ್ತ ಸಾಗುತ್ತಿದೆ. ಆದರೆ, ಈ ಕುರಿತು ತಜ್ಞರು ಮಾತ್ರವೇ ಸ್ಪಷ್ಟ ಚಿತ್ರಣ ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಇದು ಐದನೇ ಸೆರೋ ಸಮೀಕ್ಷೆಯಾಗಿದ್ದು, ದೇಶದಲ್ಲಿ ಈವರೆಗೆ ನಡೆಸಿದ ಸಮೀಕ್ಷೆಗಳಲ್ಲೇ ದೊಡ್ಡದಾಗಿದೆ. ಜನವರಿ 15ರಿಂದ 23ರ ವರೆಗೆ ಸಮೀಕ್ಷೆ ನಡೆಸಲಾಗಿತ್ತು ಎಂದು ಸಚಿವರು ತಿಳಿಸಿದ್ದಾರೆ.

‘ಸಮೀಕ್ಷೆ ವೇಳೆ ಹೊಸ ಹಾಗೂ ಉತ್ತಮ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಪ್ರತಿಯೊಂದು ವಾರ್ಡ್‌ನಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಒಟ್ಟು 28,000 ಮಾದರಿಗಳನ್ನು ಸಂಗ್ರಹಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಹೊಸ ಕೋವಿಡ್ ಪ್ರಕರಣಗಳು, ಸಾವಿನ ಸಂಖ್ಯೆ, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ. ಆದರೂ ಜನರು ಇನ್ನೂ ಕೆಲವು ತಿಂಗಳುಗಳ ಕಾಲ ಮಾಸ್ಕ್‌ಗಳನ್ನು ಧರಿಸಿ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಜೈನ್ ಹೇಳಿದ್ದಾರೆ.

ಈ ಮಧ್ಯೆ, ದೇಶದದಲ್ಲಿ 10 ಲಕ್ಷ ಜನಸಂಖ್ಯೆಗೆ ಪ್ರತಿಯಾಗಿ ಸಂಭವಿಸುವ ಕೋವಿಡ್‌ ಸಾವಿನ ಸಂಖ್ಯೆ ದಕ್ಷಿಣ ಏಷ್ಯಾ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನಗಳಿಗಿಂತಲೂ ಅಧಿಕವಿದೆ. ಇದಕ್ಕೆ ಅನೇಕ ಅಂಶಗಳು ಕಾರಣವಾಗಿರಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.