ಮುಂಬೈ: ಒಡವೆ ವಿಚಾರವಾಗಿ ಮಗಳೊಂದಿಗೆ ನಡೆದ ವಾಗ್ವಾದದಿಂದ ಬೇಸತ್ತು 52 ವರ್ಷದ ಮಹಿಳೆಯೊಬ್ಬರು ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಲೋಖಂಡ್ವಾಲಾ ಮಾರುಕಟ್ಟೆಯಲ್ಲಿ ನಡೆದಿದೆ.
ಭಾನುವಾರ ಸಂಜೆ 6ಗಂಟೆ ಸುಮಾರಿಗೆ ಹೌಸಿಂಗ್ ಸೊಸೈಟಿಯ ಏಳನೇ ಮಹಡಿಗೆ ತೆರಳಿದ ಮಹಿಳೆ ಅಲ್ಲಿಂದ ಕೆಳಗೆ ಜಿಗಿದಿದ್ದಾರೆ. ಮೃತದೇಹವು ಎರಡನೇ ಮಹಡಿಯ ಟೆರೇಸ್ ಮೇಲೆ ದೊರಕಿದೆ ಎಂದು ಓಶಿವಾರ ಪೊಲೀಸರು ತಿಳಿಸಿದ್ದಾರೆ.
32 ವರ್ಷದ ಪುತ್ರಿಯೊಂದಿಗೆ ಒಡವೆ ವಿಚಾರವಾಗಿ ವಾಗ್ವಾದ ನಡೆದದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ತನ್ನ ಗಂಡನೊಂದಿಗೆ ಹೊರಗಡೆ ಹೊರಟಿದ್ದ ಪುತ್ರಿಯ ಒಡವೆಗಳು ಕಣ್ಮರೆಯಾಗಿರುವುದು ತಿಳಿದುಬಂದಿದೆ. ಆಗ ತನ್ನ ತಾಯಿಯೇ ಅವುಗಳನ್ನು ಕದ್ದಿರಬಹುದು ಎಂದು ಶಂಕಿಸಿದ್ದಾಳೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಮಗಳು ಕೂಡಲೇ ಸ್ನಾನಗೃಹಕ್ಕೆ ತೆರಳಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ತಂದೆ ಮತ್ತು ಆಂಟಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಳಿಕ ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ ತಾಯಿ ಟೆರೇಸ್‌ಗೆ ತೆರಳಿ ಅಲ್ಲಿಂದ ಜಿಗಿದಿದ್ದಾರೆ. ಇದನ್ನು ಗಮನಿಸಿದ ಇತರೆ ನಿವಾಸಿಗಳು ಘಟನೆ ಕುರಿತು ಕಾವಲುಗಾರನಿಗೆ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಯತ್ನ ಮತ್ತು ಆತ್ಮಹತ್ಯೆಗೆ ಉತ್ತೇಜನ ನೀಡಿದ ಆರೋಪದ ಮೇಲೆ ಪುತ್ರಿಯ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪುತ್ರಿ ಮತ್ತು ಆಕೆಯ ಪತಿ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದು, ಸೊಸೈಟಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.