ADVERTISEMENT

ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಯ ಸೂಚನೆ ನೀಡಿದ ಕಾಂಗ್ರೆಸ್

ಪಿಟಿಐ
Published 15 ನವೆಂಬರ್ 2025, 9:54 IST
Last Updated 15 ನವೆಂಬರ್ 2025, 9:54 IST
ಬೃಹನ್‌ಮುಂಬೈ ಮಹಾನಗರ ಪಾಲಿಕೆ ಕಟ್ಟಡ (ಸಂಗ್ರಹ ಚಿತ್ರ)
ಬೃಹನ್‌ಮುಂಬೈ ಮಹಾನಗರ ಪಾಲಿಕೆ ಕಟ್ಟಡ (ಸಂಗ್ರಹ ಚಿತ್ರ)   

ಮುಂಬೈ: ಮಹಾವಿಕಾಸ ಅಘಾಡಿ (MVA) ಒಳಗೆ ಭಿನ್ನಾಭಿಪ್ರಾಯಗಳು ಉಂಟಾಗುವ ಲಕ್ಷಣಗಳ ಬೆನ್ನಲ್ಲೇ ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯಲ್ಲಿ ಸತಂತ್ರವಾಗಿ ಸ್ಪರ್ಧಿಸುವ ಇರಾದೆಯನ್ನು ಕಾಂಗ್ರೆಸ್ ಪಕ್ಷದ ನಾಯಕಿ ವರ್ಷಾ ಗಾಯಕ್ವಾಡ್‌ ಅವರು ಶನಿವಾರ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಸಭೆ ನಡೆಸಿದ ಅವರು, ‘ಪಾಲಿಕೆಯಲ್ಲಿ ಕಾಂಗ್ರೆಸ್ ಧ್ವಜ ಹಾರುವಂತೆ ಮಾಡಿ’ ಎಂದು ಹುರಿದುಂಬಿಸಿದರು.

‘ಬಿಎಂಸಿಯಲ್ಲಿರುವ ಎಲ್ಲಾ 227 ಕ್ಷೇತ್ರಗಳಿಗೂ ಕೆಲಸ ಮಾಡಲು ಸಿದ್ಧರಾಗಿ. ಪಾಲಿಕೆಯಲ್ಲಿ ಕಾಂಗ್ರೆಸ್‌ ಪಕ್ಷದ ಸದಸ್ಯರೇ ಇರುವಂತೆ ಕಾರ್ಯಕರ್ತರು ಕೆಲಸ ಮಾಡಬೇಕು’ ಎಂದಿದ್ದಾರೆ. 

ADVERTISEMENT

ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ್ ಚೆನ್ನಿತ್ತಲ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ ಸಪ್ಕಲ್‌ ಇದ್ದರು.

2026ರ ಜನವರಿಯಲ್ಲಿ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದೆ. ಶಿವಸೇನಾ (ಯುಬಿಟಿ)  ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಸೋದರ ಸಂಬಂಧಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್‌) ಮುಖಂಡ ರಾಜ್ ಠಾಕ್ರೆ ಜತೆಗೂಡಿ ಪಾಲಿಕೆ ಚುನಾವಣೆ ಎದುರಿಸುವ ಇಂಗಿತ ವ್ಯಕ್ತಪಡಿಸಿದ್ದರಿಂದ ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.

ಮಹಾರಾಷ್ಟ್ರಕ್ಕೆ ಉತ್ತರ ಭಾರತದ ವಲಸಿಗರನ್ನು ನಿರಂತರವಾಗಿ ವಿರೋಧಿಸುತ್ತಲೇ ಬಂದಿರುವ ರಾಜ್‌ ಠಾಕ್ರೆ ಅವರೊಂದಿಗೆ ಕೈಜೋಡಿಸುವುದನ್ನು ಕಾಂಗ್ರೆಸ್‌ನ ಒಂದು ವರ್ಗ ವಿರೋಧಿಸುವ ಸಾಧ್ಯತೆಗಳಿವೆ.

‘ಚೆನ್ನಿತ್ತಲ ಅವರಿಗೆ ಪಕ್ಷದ ಮುಖಂಡರ ಹಾಗೂ ಕಾರ್ಯಕರ್ತರ ನಿರ್ಧಾರಗಳನ್ನು ತಿಳಿಸಿದ್ದೇವೆ. ಪಕ್ಷದ ಸಿದ್ಧತೆಗಳ ಕುರಿತೂ ತಿಳಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ಇದ್ದು, ಮತದಾರರನ್ನು ತಲುಪಲು ಕೆಲಸ ಮಾಡುವಂತೆಯೂ ಪಕ್ಷದ ಕಾರ್ಯಕರ್ತರಿಗೆ ಹೇಳಲಾಗಿದೆ’ ಎಂದು ಗಾಯಕ್ವಾಡ್ ತಿಳಿಸಿದ್ದಾರೆ.

2019ರಲ್ಲಿ ಎನ್‌ಸಿಪಿ ಜತೆಗೂಡಿ ಮಹಾವಿಕಾಸ ಅಘಾಡಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2022ರಲ್ಲಿ ಹಾಗೂ 2023ರಲ್ಲಿ ಶಿವಸೇನಾ ಹಾಗೂ ಎನ್‌ಸಿಪಿಯಲ್ಲಿ ಉಂಟಾದ ವಿಘಟನೆಯಿಂದಾಗಿ ಒಂದು ಗುಂಪು ಬಿಜೆಪಿ ಜತೆಗೂಡಿ ಅಧಿಕಾರಕ್ಕೇರಿತು.

2024ರ ಲೋಕಸಭಾ ಚುನಾವಣೆಯಲ್ಲಿ ಮುಂಬೈನ 6 ಲೋಕಸಭಾ ಚುನಾವಣೆಯಲ್ಲಿ ಎರಡಲ್ಲಿ ಕಾಂಗ್ರೆಸ್ ಗೆದ್ದಿತ್ತು. ವಿಧಾನಸಭಾ ಚುನಾವಣೆಯಲ್ಲಿ 36 ಕ್ಷೇತ್ರಗಳಲ್ಲಿ 10 ಮಾತ್ರ ಗೆದ್ದಿತ್ತು. ಆದರೆ ಶಿವಸೇನಾ (ಯುಬಿಟಿ) ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.